ಬೆಳಗಾವಿ: ಬಬಲೇಶ್ವರದಲ್ಲಿ ಆರಂಭವಾದ ವಿವಾದಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ಅವರು ತೀಕ್ಷ್ಣ ಹೇಳಿಕೆ ನೀಡಿದ್ದು, ಹಿಂದು ಸಮಾಜವನ್ನು ಟಾರ್ಗೆಟ್ ಮಾಡಿ ಒಡೆಯುವ ಯತ್ನ ವಿಫಲಗೊಂಡಿದೆ ಎಂದು ಆರೋಪಿಸಿದ್ದಾರೆ. ಕನ್ನೇರಿ ಶ್ರೀಗಳ ಮೇಲೆ ಹಲವು ಕಡೆ ನಿರ್ಬಂಧ ಹೇರಲು ಪ್ರಯತ್ನ ನಡೆದಿದ್ದು, ಇಡೀ ಹಿಂದು ಸಮಾಜ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಸ್ವಾಮೀಜಿಗಳ ವಾಕ್ ಸ್ವಾತಂತ್ರ್ಯ ಮತ್ತು ಪ್ರಯಾಣ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸೂಲಿಬೆಲೆ, ಮೊದಲು ಸಹಿ ಸಂಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಕನ್ನೇರಿ ಶ್ರೀಗಳು ತಮ್ಮ ಜೀವನದಲ್ಲಿ ಬಸವತತ್ವವನ್ನು ಅಳವಡಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದ ಅವರು, ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ಹಿಂದು ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಸವಾದಿ ಶರಣರ ಹಿಂದು ಸಮಾವೇಶ ಆಯೋಜಿಸಲಾಗುವುದು ಎಂದು ಘೋಷಿಸಿದ ಸೂಲಿಬೆಲೆ, ಮೊದಲ ಸಮಾವೇಶವನ್ನು ಬಬಲೇಶ್ವರದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. “ಎಲ್ಲಿಂದ ಆರಂಭವಾಯಿತೋ ಅಲ್ಲಿಂದಲೇ ಹೋರಾಟ ಆರಂಭಿಸುತ್ತೇವೆ” ಎಂದು ಧೈರ್ಯ ತೋರಿದ್ದಾರೆ. ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಟಾಂಗ್ ನೀಡುವ ರೀತಿಯಲ್ಲಿ ಮಾತನಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.












