ಬೆಂಗಳೂರು: ಗ್ರಾಹಕರ ಕುಂದುಕೊರತೆಗಳ ನಿರ್ವಹಣೆಯ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಡಿಜಿಟಲ್ ಪೋರ್ಟಲ್ ಪರಿಚಯಿಸಲು ಮುಂದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹಾಗೂ ಬೆಸ್ಕಾಂ ಸಹಯೋಗದಲ್ಲಿ ಮಂಗಳವಾರ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಈ ಕಾರ್ಯಾಗಾರದಲ್ಲಿ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆಯ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
“ದೂರು ನಿರ್ವಹಣೆಗೆ ಕಾರ್ಪೋರೇಟ್ ವ್ಯವಹಾರಗಳ ಮುಖ್ಯ ಪ್ರಧಾನ ವ್ಯವಸ್ಥಾಪಕರನ್ನು ನೇಮಕ ಮಾಡಲಾಗಿದೆ. ಗ್ರಾಹಕರ ಹಕ್ಕುಗಳಿಗೆ ಆದ್ಯತೆ ನೀಡುತ್ತಾ, ಪಾರದರ್ಶಕ ಸೇವೆಯನ್ನು ನೀಡುವುದು ನಮ್ಮ ಗುರಿಯಾಗಿದೆ. ಈ ದೃಷ್ಟಿಯಿಂದ ಡಿಜಿಟಲ್ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ,” ಎಂದು ಡಾ.ಶಿವಶಂಕರ ತಿಳಿಸಿದರು.
ಅವರು ಮುಂದಾಗಿ ಹೇಳಿದರು: “ಕೆಇಆರ್‌ಸಿ ಆದೇಶದಂತೆ ಸ್ಥಾಪಿಸಲಾದ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ (ಸಿಜಿಆರ್‌ಎಫ್) ನಿರ್ದಿಷ್ಟ ಕಾಲಮಿತಿಯೊಳಗೆ ದೂರುಗಳನ್ನು ಇತ್ಯರ್ಥಗೊಳಿಸಲು ಬದ್ಧವಾಗಿದೆ. ಜಿಲ್ಲಾಸ್ಥರದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಸ್ವತಂತ್ರ ಸದಸ್ಯರನ್ನೊಳಗೊಂಡ ವೇದಿಕೆ ಕಾರ್ಯನಿರ್ವಹಿಸುತ್ತದೆ. ಕಾರ್ಪೋರೇಟ್ ಕಚೇರಿಯ ಸಿಜಿಆರ್‌ಎಫ್‌ನಲ್ಲಿ ದೂರು ಇತ್ಯರ್ಥವಾಗದಿದ್ದರೆ ಗ್ರಾಹಕರು ಕೆಇಆರ್‌ಸಿ ಲೋಕಪಾಲ (ಓಂಬುಡ್ಸ್‌ಮನ್) ಬಳಿಗೆ ಸಲ್ಲಿಸಬಹುದಾಗಿದೆ.”
ಕಾರ್ಯಾಗಾರವನ್ನು ಉದ್ಘಾಟಿಸಿದ ಕೆಇಆರ್‌ಸಿಯ ಅಧ್ಯಕ್ಷ ಹಾಗೂ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡುತ್ತಾ, “ದೂರಿನ ಇತ್ಯರ್ಥನೆಯಲ್ಲಿ ನ್ಯಾಯ ಮತ್ತು ತ್ವರಿತ ಸ್ಪಂದನೆ ಮುಖ್ಯ. ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಗ್ರಾಹಕರ ನಂಬಿಕೆ ಹೆಚ್ಚುತ್ತದೆ,” ಎಂದರು.
ಕೆಇಆರ್‌ಸಿ ಸದಸ್ಯ (ಕಾನೂನು) ಹೆಚ್.ಕೆ. ಜಗದೀಶ್, ವಿದ್ಯುಚ್ಛಕ್ತಿ ಅಧಿನಿಯಮ 2003ರ ಸೆಕ್ಷನ್ 42 (5) ಮತ್ತು (6) ಅಡಿಯಲ್ಲಿ ವೇದಿಕೆಗಳ ಚಟುವಟಿಕೆಗಳು ಅರೆನ್ಯಾಯಿಕ ಪ್ರಾಧಿಕಾರಗಳಾಗಿ ಪರಿಗಣಿಸಲ್ಪಟ್ಟಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಸ್ಪಷ್ಟತೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ನಿವೃತ್ತ ನ್ಯಾಯಮೂರ್ತಿ ಕೃಷ್ಣಯ್ಯ, ಐಎಫ್ ಬಿದರಿ ಸೇರಿದಂತೆ ವಿವಿಧ ತಜ್ಞರು, ಅಧಿಕಾರಿಗಳಿಗೆ ಗ್ರಾಹಕರ ಹಕ್ಕುಗಳು, ತಾಂತ್ರಿಕ ಅಂಶಗಳು ಹಾಗೂ ಸಾಮಾನ್ಯ ದೂರುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆಇಆರ್‌ಸಿ ಕಾರ್ಯದರ್ಶಿ ಸಿದ್ದೇಶ್ವರ್, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ. ರಮೇಶ್, ಹಣಕಾಸು ನಿರ್ದೇಶಕ ಮಹಾದೇವ, ಮಾನವ ಸಂಪನ್ಮೂಲ ವಿಭಾಗದ ಡಾ. ದಯಾನಂದ್, ಗ್ರಾಹಕ ಸಂಬಂಧ ಶಾಖೆಯ ರಾಜೋಜಿ ರಾವ್, ನಿಗಮ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕಿ ಪುಷ್ಪ ಎಸ್.ಎ ಮತ್ತಿತರರು ಉಪಸ್ಥಿತರಿದ್ದರು.