ಬೆಂಗಳೂರು: 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ, ಕೇಂದ್ರ ಸಂವಹನ ಇಲಾಖೆಯು ಬ್ರಹ್ಮಕುಮಾರಿ ಸಂಸ್ಥೆಯ ಸಹಯೋಗದೊಂದಿಗೆ ಜೂನ್ 15ರಂದು ಬೆಂಗಳೂರಿನ ಗೊಟ್ಟಿಗೆರೆಯ ರಾಜಯೋಗ ಭವನದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಯೋಗ ಉತ್ಸಾಹಿಗಳು ಭಾಗವಹಿಸಿ, ಮಕ್ಕಳಿಂದ ಹಿರಿಯರವರೆಗಿನ ಎಲ್ಲಾ ವಯಸ್ಸಿನ ಯೋಗಾಭ್ಯಾಸಿಗಳು ಯೋಗಾಸನಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ಸಂಸ್ಥೆಯ ವಿವಿ ಪುರಂ ಉಪವಲಯದ ಅಧ್ಯಕ್ಷೆ ಸೋದರಿ ರಾಜಯೋಗಿನಿ ಬಿ.ಕೆ. ಅಂಬಿಕಾ, “ಅಂತಾರಾಷ್ಟ್ರೀಯ ಯೋಗ ದಿನವು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಉತ್ಸಾಹದಿಂದ ಆಚರಿಸಲ್ಪಡುತ್ತಿದೆ. ಯೋಗ ದಿನಾಚರಣೆ ಮತ್ತು ಯೋಗಾಭ್ಯಾಸವು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ, ಸರ್ವತೋಮುಖ ಅಭಿವೃದ್ಧಿಗಾಗಿ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕಾದ ಅಭ್ಯಾಸವಾಗಿದೆ,” ಎಂದು ತಿಳಿಸಿದರು.
ಯೋಗವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ನೀಡುವ ಕೊಡುಗೆಯನ್ನು ಒತ್ತಿ ಹೇಳಿದ ಅವರು, “ಯೋಗ ಮತ್ತು ರಾಜಯೋಗ ಧ್ಯಾನದ ಮೂಲಕ ಜೀವನದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯರು, ಕೇಂದ್ರ ಸಂವಹನ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಯೋಗದ ಮಹತ್ವವನ್ನು ಪ್ರಚಾರ ಮಾಡುವ ಜೊತೆಗೆ, ಜನರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.