ಶಿವಮೊಗ್ಗ: ಭದ್ರಾನಾಲೆ ಒಡೆದು ಒಂಬತ್ತು ದಿನಗಳು ಕಳೆದರೂ ಸರಿ ಮಾಡದೆ ಇರುವುದನ್ನು ವಿರೋಧಿಸಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು, “ನಾಳೆ ಸಂಜೆಯೊಳಗೆ ಹೊಡೆದು ಹೋಗಿರುವ ನಾಲೆ ಸರಿ ಮಾಡಬೇಕು, ಇಲ್ಲದಿದ್ದರೆ ಹೊನ್ನಾಳಿಯಲ್ಲಿ ಬಂದ್ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
“ಸರ್ಕಾರದ ಬಳಿ ನಾಲೆ ದುರಸ್ಥಿಗೆ ಹಣ ಇಲ್ಲದಂತಾಗಿದೆ. ಈ ಸರ್ಕಾರ ದಿವಾಳಿಯಾಗಿದೆ, ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ,” ಎಂದು ರೇಣುಕಾಚಾರ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.
ಶಾಸಕರ ಅಮಾನತು ಪ್ರಕರಣ: ಆಡಳಿತ ಪಕ್ಷ-ವಿಪಕ್ಷ ಒಂದೇ ನಾಣ್ಯದ ಎರಡು ಮುಖಗಳು – ರೇಣುಕಾಚಾರ್ಯ
ವಿಧಾನಸಭೆಯಲ್ಲಿ ಬಿಜೆಪಿಯ ೧೮ ಶಾಸಕರ ಅಮಾನತು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, “ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಒಂದೇ ನಾಣ್ಯದ ಎರಡು ಮುಖಗಳಂತೆ ನಡೆದುಕೊಳ್ಳುತ್ತಿವೆ” ಎಂದು ಗಂಭೀರ ಆರೋಪ ಮಾಡಿದರು.
“ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾಗ ಮಾರ್ಷಲ್‌ರನ್ನು ತಳ್ಳಿ ಬಾಗಿಲಿಗೆ ಒದ್ದಿದ್ದರು. ಆಗ ಪೀಠಕ್ಕೆ ಅಪಮಾನ ಆಗಲಿಲ್ಲವೇ? ಆದರೆ ಈಗ ನಮ್ಮ ಶಾಸಕರನ್ನು ಅಮಾನತು ಮಾಡಲಾಗುತ್ತಿದೆ” ಎಂದು ಪ್ರಶ್ನಿಸಿದರು.
“ಈ ಸರ್ಕಾರ ಹಿಂದೂ ವಿರೋಧಿ ಮತ್ತು ರೈತ ವಿರೋಧಿ. ಹನಿಟ್ರ್ಯಾಪ್ ಪ್ರಕರಣದ ತನಿಖೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಧರ್ಮದ ಆಧಾರದಲ್ಲಿ ಗುತ್ತಿಗೆ ನೀಡುತ್ತಿದ್ದಾರೆ. ಇದನ್ನು ನೋಡಲು ಇವರಿಗೆ ನಾಚಿಕೆ ಆಗುತ್ತಿಲ್ಲವೇ?” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯತ್ನಾಳ್ ವಿರುದ್ಧ ರೇಣುಕಾಚಾರ್ಯ ತೀವ್ರ ಟೀಕೆ
ಮಾಜಿ ಸಚಿವ ರೇಣುಕಾಚಾರ್ಯ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಗುಡುಗಿದ್ದು, “ಯತ್ನಾಳ್ ಒಬ್ಬ ಅಡ್ಜಸ್ಟ್ಮೆಂಟ್ ರಾಜಕಾರಣಿ” ಎಂದು ವಾಗ್ದಾಳಿ ನಡೆಸಿದರು.
“ಎಲ್ಲರು ಬಣ್ಣ ಹಚ್ಚಿ ನಾಟಕ ಮಾಡಿದರೆ, ಯತ್ನಾಳ್ ಮಾತ್ರ ಬಣ್ಣ ಹಚ್ಚದೇ ನಾಟಕ ಮಾಡುತ್ತಾರೆ. ಅವರು ಹಿಂದುತ್ವದ ಬಗ್ಗೆ ಹೆಚ್ಚು ಮಾತನಾಡುತ್ತಾರೆ, ಆದರೆ ಅವರದು ನಕಲಿ ಹಿಂದುತ್ವ. ಅವರು ಜೆಡಿಎಸ್‌ಗೆ ಹೋಗಿ ಟಿಪ್ಪು ಅವತಾರ ತಾಳಿದ್ದರು. ಕೆಲವೊಮ್ಮೆ ಲಿಂಗಾಯತ ಎಂದು ಹೇಳುತ್ತಾರೆ, ಮತ್ತೆ ಕೆಲವು ವೇಳೆ ಪಂಚಮಸಾಲಿ ಅಂತಾರೆ” ಎಂದು ವಾಗ್ದಾಳಿ ನಡೆಸಿದರು.
“ಯತ್ನಾಳ್ ಮಾಡಿರುವ ಭ್ರಷ್ಟಾಚಾರದ ದಾಖಲೆ ಸಮೇತ ಇದೆ. ನಾವು ವಿಜಯೇಂದ್ರ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ” ಎಂದು ಅವರು ಘೋಷಿಸಿದರು.
ಶಿವಮೊಗ್ಗದಲ್ಲಿ ಈ ರಾಜಕೀಯ ಕುತೂಹಲ ತೀವ್ರವಾಗಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆಗಳು ಯಾವ ದಿಕ್ಕು ಪಡೆದುಕೊಳ್ಳುತ್ತವೆ ಎಂಬುದು ಕುತೂಹಲ ಮೂಡಿಸಿದೆ.