ಬೆಂಗಳೂರು: ಭಾರತವು ವಿದ್ಯುತ್ ವಾಹನಗಳ (EV) ಬಳಕೆ ಮತ್ತು ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದರೂ, ವಿದೇಶಿ ಆಮದು ಬಿಡಿಭಾಗಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶೀಯ ಉತ್ಪಾದನೆಗೆ ಆದ್ಯತೆ ನೀಡಬೇಕೆಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ವಿದ್ಯುತ್ ವಾಹನ ತಂತ್ರಜ್ಞಾನದ ಪರಿವರ್ತನೆಯು ದೇಶದಲ್ಲಿ ವೇಗ ಪಡೆದುಕೊಳ್ಳುತ್ತಿದೆ. ಆದರೆ, ಬ್ಯಾಟರಿ ಸೆಲ್‌ಗಳು, ರೇರ್ ಎರ್ಥ್ ಮ್ಯಾಗ್ನೆಟ್‌ಗಳು, ಸೆಮಿಕಂಡಕ್ಟರ್ ಚಿಪ್‌ಗಳು ಮತ್ತು ಎಡ್ವಾನ್ಸ್ಡ್ ಪವರ್‌ಟ್ರೈನ್ ಘಟಕಗಳಂತಹ ಪ್ರಮುಖ ಬಿಡಿಭಾಗಗಳ ಬಹುತೇಕ ಆಮದು ವಿದೇಶಗಳಿಂದಲೇ ಆಗುತ್ತಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ಸೆಮಿಕಂಡಕ್ಟರ್ ಕೊರತೆಯಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ, ಇತರ ಅಗತ್ಯ ಆಮದು ಘಟಕಗಳ ಕೊರತೆಯಿಂದಾಗಿ ಮತ್ತೊಂದು ಸವಾಲನ್ನು ಎದುರಿಸುತ್ತಿದೆ.
ಕೇಂದ್ರ ಸರ್ಕಾರವು ವಿದ್ಯುತ್ ವಾಹನಗಳನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ದೇಶೀಯ ಉತ್ಪಾದನಾ ಸಾಮರ್ಥ್ಯವು ಇನ್ನೂ ಕುಂಠಿತವಾಗಿದೆ. “ತಕ್ಷಣವೇ ದೇಶೀಯ ಉತ್ಪಾದನಾ ಸರಪಳಿಯನ್ನು ಸ್ಥಾಪಿಸದಿದ್ದರೆ, ಇಂಧನ ಅವಲಂಬನೆಯಿಂದ (ಪೆಟ್ರೋಲ್/ಡೀಸೆಲ್) ಹೊರಬಂದು ವಿದೇಶೀ ತಂತ್ರಜ್ಞಾನ ಮತ್ತು ವಸ್ತುಗಳ ಮೇಲೆ ಅವಲಂಬಿತವಾಗುವ ಅಪಾಯವಿದೆ,” ಎಂದು ಸಂಘದ ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘವು ತನ್ನ ಮನವಿಯಲ್ಲಿ, ಭಾರತವು EV ತಂತ್ರಜ್ಞಾನ ಮತ್ತು ಬಿಡಿಭಾಗಗಳ ದೇಶೀಯ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದೆ. ಇದರಿಂದ ಆರ್ಥಿಕ ಸ್ವಾವಲಂಬನೆಯ ಜೊತೆಗೆ ದೇಶದ ವಿದ್ಯುತ್ ವಾಹನ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ಸಂಘವು ವಿಶ್ವಾಸ ವ್ಯಕ್ತಪಡಿಸಿದೆ.