- iOS, Android ಮತ್ತು Windows ಪ್ಲಾಟ್‌ಫಾರ್ಮ್‌ಗಳಿಗೆ ಹೊಂದಿಕೆಯಾಗುವ ಭಾರತೀಯ ಬ್ರೌಸರ್ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್
- “ಸೆರ್ವೀಸ್ ನೇಷನ್’ನಿಂದ ‘ಪ್ರೊಡಕ್ಟ್ ನೇಷನ್’ನತ್ತ ಭಾರತ” – ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
- ಭಾರತೀಯ ವೆಬ್ ಬ್ರೌಸರ್ ಚಾಲೆಂಜ್‌ನಲ್ಲಿ ZOHO ಗೆಲುವು; PING ತಂಡ 1ನೇ ರನ್ನರ್-ಅಪ್, Ajna 2ನೇ ರನ್ನರ್-ಅಪ್; Jio Vishwakarma ವಿಶೇಷ ಪ್ರಶಸ್ತಿ
ನವದೆಹಲಿ, ಮಾರ್ಚ್ 20, 2025: ವಿಶ್ವ ಸಂತೋಷ ದಿನಾಚರಣೆ ಪ್ರಯುಕ್ತ, ಭಾರತ ಸರ್ಕಾರ ಜನತೆಗೆ ಸುರಕ್ಷಿತ ಮತ್ತು ನಾವೀನ್ಯತೆಯ ದಿಟ್ಟ ಹೆಜ್ಜೆ ಇಟ್ಟಿದೆ. USD 282 ಬಿಲಿಯನ್ ಆದಾಯ ಉತ್ಪಾದಿಸುವ ಭಾರತದ ಐಟಿ ಕ್ಷೇತ್ರವು ಇದೀಗ ಸ್ವದೇಶಿ ತಂತ್ರಾಂಶ ಮತ್ತು ಉಪಕರಣಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ. ಈ ದಿಸೆಯಲ್ಲಿ, ಮೆಟಿಯ (MeitY – Ministry of Electronics and Information Technology) ಭಾರತೀಯ ಬ್ರೌಸರ್ ಅಭಿವೃದ್ಧಿಗೆ ಆತ್ಮನಿರ್ಭರ್ ಭಾರತ ಯೋಜನೆಯಡಿಯಲ್ಲಿ ಮಹತ್ವಾಕಾಂಕ್ಷಿ ಸ್ಪರ್ಧೆಯನ್ನು ಆರಂಭಿಸಿತು. ಈ ವಿಶೇಷ ಕಾರ್ಯಕ್ರಮವನ್ನು ಬೆಂಗಳೂರು ಸಿ-ಡ್ಯಾಕ್ (C-DAC) ಆಯೋಜಿಸಿತ್ತು.
ಭಾರತೀಯ ವೆಬ್ ಬ್ರೌಸರ್ ಅಭಿವೃದ್ಧಿ ಸ್ಪರ್ಧೆಯಲ್ಲಿ ವಿಜೇತರು
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತೀಯ ವೆಬ್ ಬ್ರೌಸರ್ ಡೆವಲಪ್‌ಮೆಂಟ್ ಚಾಲೆಂಜ್ (IWBDC) ಸ್ಪರ್ಧೆಯ ಫಲಿತಾಂಶ ಘೋಷಿಸಿದರು. ZOHO ಸಂಸ್ಥೆ ವಿಜೇತರಾಗಿ ಹೊರಹೊಮ್ಮಿದರೆ, PING ತಂಡ 1ನೇ ರನ್ನರ್-ಅಪ್ ಮತ್ತು Ajna ತಂಡ 2ನೇ ರನ್ನರ್-ಅಪ್ ಆಗಿದ್ದಾರೆ. ವಿಜೇತರಿಗೆ ಕ್ರಮವಾಗಿ ₹1 ಕೋಟಿ, ₹75 ಲಕ್ಷ ಮತ್ತು ₹50 ಲಕ್ಷ ನಗದು ಬಹುಮಾನ ನೀಡಲಾಯಿತು. Jio Vishwakarma ತಂಡದ ಬಹು-ಪ್ಲಾಟ್‌ಫಾರ್ಮ್ ವಿನ್ಯಾಸಕ್ಕೆ ವಿಶೇಷ ಉಲ್ಲೇಖ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, “ಭಾರತವು ಸೇವಾ ರಾಷ್ಟ್ರದಿಂದ ಉತ್ಪಾದನಾ ರಾಷ್ಟ್ರವಾಗಿ ಪರಿವರ್ತನೆಯ ಹಾದಿಯಲ್ಲಿದೆ. ತಂತ್ರಜ್ಞಾನ, ಹಾರ್ಡ್‌ವೇರ್ ಮತ್ತು ತಂತ್ರಾಂಶದ ಸ್ವಾವಲಂಬನೆಯು ನಮ್ಮ ಪ್ರಮುಖ ಗುರಿಯಾಗಿದೆ” ಎಂದು ಹೇಳಿದರು. ಭಾರತೀಯ ಬ್ರೌಸರ್ ಅಭಿವೃದ್ಧಿ ದೇಶದ ಡಿಜಿಟಲ್ ಸ್ವಾವಲಂಬನೆಯಲ್ಲಿ ಮಹತ್ವದ ಹೆಜ್ಜೆ ಎಂದು ಅವರು ಒತ್ತಿಹೇಳಿದರು.
ಸ್ವದೇಶೀ ಬ್ರೌಸರ್ – ಹೊಸ ಶಕ್ತಿಯ ಸಂಕೇತ
ಭಾರತೀಯ ಬ್ರೌಸರ್ iOS, Android ಮತ್ತು Windows ಪ್ಲಾಟ್‌ಫಾರ್ಮ್‌ಗಳಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಪ್ರಮುಖ ಪ್ರಯೋಜನಗಳೆಂದರೆ:
- ಮಾಹಿತಿ ಭದ್ರತೆ: ಬಳಕೆದಾರರ ಡೇಟಾ ದೇಶದೊಳಗೇ ಉಳಿಯುವುದು.
- ಭಾರತೀಯ ಡೇಟಾ ಪ್ರೊಟೆಕ್ಷನ್ ಆಕ್ಟ್‌ಗೆ ಅನುಗುಣ: ಗೌಪ್ಯತೆ ಮತ್ತು ಸುರಕ್ಷತೆಯ ನಿಯಮ ಪಾಲನೆ.
- ಭಾರತೀಯ ಭಾಷೆಗಳಿಗಾಗಿ ಸಂಪೂರ್ಣ ಬೆಂಬಲ: ಅಧಿಕೃತ ಭಾಷೆಗಳಿಗೆ ಪರಿಪೂರ್ಣ ಹೊಂದಾಣಿಕೆ.
- Web3 ತಂತ್ರಜ್ಞಾನ ಬೆಂಬಲ: ಬ್ಲಾಕ್‌ಚೈನ್, ಡಿಜಿಟಲ್ ಒಪ್ಪಂದಗಳು, ಸುಧಾರಿತ ಬ್ರೌಸಿಂಗ್ ತಂತ್ರಜ್ಞಾನ.
434 ತಂಡಗಳಿಂದ 8 ಅಂತಿಮ ಸ್ಪರ್ಧಾತ್ಮಕ ತಂಡಗಳ ಆಯ್ಕೆ
IWBDC ಸ್ಪರ್ಧೆಗೆ 434 ತಂಡಗಳು ನೋಂದಾಯಿಸಿಕೊಂಡಿದ್ದರೆ, ಅಂತಿಮ ಸುತ್ತಿಗೆ 8 ತಂಡಗಳು ಆಯ್ಕೆಯಾಗಿದ್ದವು. ಈ ಸ್ಪರ್ಧೆಯು Idea, Prototype ಮತ್ತು Productization ಹಂತಗಳಾಗಿ ಮೂರು ಹಂತಗಳಲ್ಲಿ ನಡೆಯಿತು. ನ್ಯಾಯಾಧೀಶ ಪ್ಯಾನೆಲ್‘ನಿಂದ ತಪಾಸಣೆಯಾದ ನಂತರ, ವಿಜೇತರು ಘೋಷಿಸಲಾಯಿತು.
ಭಾರತದ ಡಿಜಿಟಲ್ ಭವಿಷ್ಯಕ್ಕೆ ಹೊಸ ಆಯಾಮ
ಈ ಕಾರ್ಯಕ್ರಮದಲ್ಲಿ ಮೆಟಿಯ ಕಾರ್ಯದರ್ಶಿ ಎಸ್. ಕೃಷ್ಣನ್, ಹೆಚ್ಚುವರಿ ಕಾರ್ಯದರ್ಶಿಗಳು ಅಭಿಷೇಕ್ ಸಿಂಗ್ ಮತ್ತು ಭುವನೇಶ್ ಕುಮಾರ್, ಸಿ-ಡ್ಯಾಕ್ ಪ್ರಧಾನ ನಿರ್ದೇಶಕ ಇ. ಮಾಗೇಶ್, ಸಿಸಿಎ ಅರ್ವಿಂದ್ ಕುಮಾರ್, ವಿಜ್ಞಾನಿ ಸುನಿತಾ ವರ್ಮಾ ಹಾಗೂ ಹಲವು ಉನ್ನತ ಅಧಿಕಾರಿಗಳು ಭಾಗವಹಿಸಿದರು.
ಭಾರತ ಸ್ವಂತ Certificate Trust Store ಹೊಂದಿದ ಬ್ರೌಸರ್‌ಗಳೊಂದಿಗೆ, ವಿಶ್ವಾಸಾರ್ಹ ಡಿಜಿಟಲ್ ವಾತಾವರಣಕ್ಕೆ ಹೆಜ್ಜೆ ಇಟ್ಟಿದೆ. ಭಾರತೀಯರಿಗಾಗಿ ಭಾರತೀಯ ತಂತ್ರಜ್ಞಾನ ಎಂಬ ದೃಷ್ಟಿಕೋನದಿಂದ, IWBDC ಸ್ಪರ್ಧೆ ಭಾರತಕ್ಕೆ ಹೊಸ ಗುರಿ ನಿಗದಿಪಡಿಸಿದೆ.