ಬೆಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಮರ ನೆಡುವಿಕೆ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಪರಿಹಾರ ಮತ್ತು ಪುನರ್ವಸತಿ, ರಾಷ್ಟ್ರೀಯ ಪರಿಸರ ಮತ್ತು ಸಾಕ್ಷರತಾ ಸಂರಕ್ಷಣಾ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಇಂದು ರಾಜಭವನದ ಗಾಜಿನಮನೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಚತುರ್ಥ ಚರಣ್ ಕಬ್ಸ್ ಹೀರಕ್ ಪಂಖ್ ಬುಲ್ಬುಲ್ಸ್ ರಾಜ್ಯ ಪುರಸ್ಕಾರ ಸ್ಕೌಟ್ಸ್, ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ಗಳಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಿ ಮಾತನಾಡಿದ ರಾಜ್ಯಪಾಲರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಧೈರ್ಯ, ಸಂಕಲ್ಪ ಮತ್ತು ನಿಸ್ವಾರ್ಥ ಸೇವೆ ಶ್ಲಾಘನೀಯವಾದದ್ದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಸನ್ನದ್ಧರಾಗಿರಿ ಮತ್ತು ಸೇವೆ ಮಾಡಿ ಧ್ಯೇಯವಾಕ್ಯವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸಂಸ್ಥೆಯ ಪಾಲಿಸುತ್ತಿದ್ದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ಕೈ ಜೋಡಿಸಿದೆ. ಎಂದರು
“1907 ರಲ್ಲಿ 20 ಮಕ್ಕಳೊಂದಿಗೆ ‘ಬ್ರೌನ್ ಸೀ’ ದ್ವೀಪದಲ್ಲಿ ಲಾರ್ಡ್ ಬಾಡೆನ್ ಪೊವೆಲ್ ಪ್ರಾರಂಭಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇಂದು ವಿಶ್ವದ 216ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿದೊಡ್ಡ ಅಂತರರಾಷ್ಟ್ರೀಯ ಸ್ವಯಂಪ್ರೇರಿತ, ರಾಜಕೀಯೇತರ, ಶೈಕ್ಷಣಿಕ ಸಂಸ್ಥೆಯಾಗಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ತನ್ನ ಉದ್ದೇಶದ ಪ್ರಕಾರ, ಯುವಕರಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಮತ್ತು ಆರ್ಥಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ, ಜ್ಞಾನ ಮತ್ತು ಕೌಶಲ್ಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಜವಾಬ್ದಾರಿಯುತ ನಾಗರಿಕರಾಗಿ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಸೇವೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಕಳೆದ 100 ವರ್ಷಗಳಲ್ಲಿ 7 ಲಕ್ಷ 50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ಸೃಜಿಸಲಾಗಿದೆ. ಸಂಸ್ಥೆಯ ಸಾಧನೆಗಳ ಜೊತೆಗೆ ಸ್ಕೌಟಿಂಗ್ ಮತ್ತು ಗೈಡಿಂಗ್ ಮೂಲಕ ನಮ್ಮ ಜೀವನದಲ್ಲಿ ಬೇರೂರಿರುವ ಮೌಲ್ಯಗಳು ಮತ್ತು ತತ್ವಗಳಿಗೆ ಮಹತ್ವ ನೀಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ತಮ್ಮ ಕೆಲಸದ ಮೂಲಕ ಸಂಸ್ಥೆಗೆ ಮತ್ತು ಸಮಾಜಕ್ಕೆ ಕೀರ್ತಿ ತಂದ ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಸೇವಾ ಮನೋಭಾವಕ್ಕೆ ಮನ್ನಣೆಯಾಗಿದೆ. ಈ ಪ್ರಶಸ್ತಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಪೀಳಿಗೆಯಿಂದ ಪೀಳಿಗೆಗೆ ಸ್ಫೂರ್ತಿ ನೀಡಿವೆ ಎಂದು ಅವರು ತಿಳಿಸಿದರು.
ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ ರಾಜ್ಯಪಾಲರು, ನೀವೆಲ್ಲರೂ ಜೀವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜ ಮತ್ತು ರಾಷ್ಟ್ರದ ಉನ್ನತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
“ಸ್ವಾಮಿ ವಿವೇಕಾನಂದರ ವಿಚಾರಗಳು ಅವರ ಕಾಲದಲ್ಲಿ ಇದ್ದಂತೆಯೇ ಇಂದಿಗೂ ಪ್ರಸ್ತುತವಾಗಿವೆ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಇಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿಯ ಅಗತ್ಯ ಹೆಚ್ಚಿದ್ದು, ಇದರ ಜವಾಬ್ದಾರಿ ನಮ್ಮ ಯುವ ಪೀಳಿಗೆಯ ಮೇಲಿದೆ. ಯುವಕರು ಧರ್ಮ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಜಗತ್ತಿನಲ್ಲಿ ವಿಸ್ತರಿಸುವ ಕೆಲಸ ಮಾಡಬೇಕು.
ಭಾರತ ದೇಶವು ವಸುಧೈವ ಕುಟುಂಬಕ” ಮತ್ತು “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ವಿಶ್ವದಲ್ಲಿ ಏಕತೆಯ ಸಾರ್ವತ್ರಿಕ ಭಾವನೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ನಾವೆಲ್ಲರೂ ಇದರಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ನಿಮ್ಮ ಧೈರ್ಯ, ಸಂಕಲ್ಪ ಮತ್ತು ನಿಸ್ವಾರ್ಥ ಸೇವೆ ಶ್ಲಾಘನೀಯ. ಜೀವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಶಕ್ತಿ ಮತ್ತು ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಿ ಮತ್ತು ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಕೊಡುಗೆ ನೀಡಬೇಕು” ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಮಾತನಾಡಿ ಮಂಗಳೂರಿನ ಸೇಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಸಹ ಸ್ಕೌಟ್ಸ್ ಆಗಿ ಕಾರ್ಯಚಟುವಟಿಕೆಯಲ್ಲಿ ಕಾರ್ಯನಿರ್ವಹಿಸಿದ್ದೆ. ಈಗ ನಾನು ವಿಧಾನ ಸಭೆಯ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನೀವು ಕೂಡ ಉತ್ತಮ ರಾಜಕಾರಣಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಸೇವೆ ಮಾಡಿ ಸರಕಾರ ಮತ್ತು ಸಾರ್ವಜನಿಕರ ಮೆಚ್ಚುಗೆ ಗಳಿಸಬೇಕು ಎಂದು ತಿಳಿಸಿದರು.
ನಿಮಗೆ ತಂದೆ, ತಾಯಿ, ಶಿಕ್ಷಕರ ಸಹಕಾರವಿದೆ. ನಿಮಗೆ ಉತ್ತಮ ಭವಿಷ್ಯ ಸಿಗಲಿ. ನಾಯಕತ್ವವನ್ನು ಬೆಳಿಸಿಕೊಳ್ಳಿ, ಸಮಸ್ಯೆಗಳನ್ನು ಬಗೆಹರಿಸುವ ವ್ಯಕ್ತಿತ್ವ ನಿಮ್ಮಲ್ಲಿದೆ. ದೈಹಿಕ, ಬೌದ್ಧಿಕ, ಸಾಮಾಜಿಕ, ಆಧ್ಯಾತ್ಮಿಕ ಉನ್ನತಿ ಸಾಧಿಸುವುದರ ಜೊತೆಗೆ ಪ್ರಾದೇಶಿಕ, ರಾಷ್ಟೀಯ, ಅಂತರರಾಷ್ಟ್ರೀಯ ಮಟ್ಟದ ಹೊಣೆಗಾರಿಕೆ ರೂಪುಗೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಜೀವನ ಶಿಕ್ಷಣ, ಕ್ಯಾಂಪಿಂಗ್, ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ, ಸಾಹಸಮಯ ಚಟುವಟಿಕೆಗಳು, ಕರಕುಶಲತೆ, ಅಡುಗೆ ತಯಾರಿಕೆ, ಸಮುದಾಯ ಸೇವೆಗಳಲ್ಲಿ ಭಾಗವಹಿಸುವಿಕೆ ಕೌಶಲ್ಯ ತರಬೇತಿಯಂತಹ ಹಲವಾರು ಚಟುವಟಿಕೆಗಳಲ್ಲಿ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್. ಸಿಂಧ್ಯಾ ಮಾತನಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನ ಮಕ್ಕಳು 2024-25ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮುಖ್ಯ ಆಯುಕ್ತರ ನಾಯಕತ್ವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಗಳು, ವಿಪತ್ತು ನಿರ್ವಹಣೆ, ಚುನಾವಣೆಗಳ ಮತದಾನದ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ನಿರ್ವಹಿಸುವುದು, ಕೃಷಿ ಅರಿವು ಕಾರ್ಯಕ್ರಮ, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಪ್ರೇರಣಾ ಕಾರ್ಯಕ್ರಮ, ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ವಿವಿಧ ಯೋಜನೆಗಳು, ವಿವಿಧ ಜಿಲ್ಲೆಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಆಹಾರ ಮತ್ತು ನೀರಿನ ಮಿತಬಳಕೆಯ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ ಮೊದಲಾದ ಸಮುದಾಯ ಸೇವೆಗಳಲ್ಲಿ ತನ್ನನ್ನು ತೊಡಗಿಸಿದೊಂಡು ಸೇವೆ ಸಲ್ಲಿಸುತ್ತಿದೆ ಎಂದು ಮಾಹಿತಿ ನೀಡಿದರು.
ಅಷ್ಟೇ ಅಲ್ಲದೇ ಸವದತ್ತಿ ಯಲ್ಲಮ್ಮ ಜಾತ್ರೆ, ಹಾಸನಾಂಬ, ದಸರಾ ಮಹೋತ್ಸವ, ಗೀತಾ ಗಾಯನ, ಯೂತ್ ಡೇ ವಿವಿಧ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಹೆಚ್ಚುವರಿ ರಾಜ್ಯ ಮುಖ್ಯ ಆಯುಕ್ತರಾಗಿ ಘೋಷಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ನ ರಾಜ್ಯ ಆಯುಕ್ತ ಎಂ. ಎ. ಖಾಲೀದ್, ಗೈಡ್ಸ್ ನ ರಾಜ್ಯ ಆಯುಕ್ತರಾದ ಗೀತಾ ನಟರಾಜನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಧಿಕಾರಿಗಳು ಸೇರಿದಂತೆ ಹಿರಿಯ ಗಣ್ಯರು, ಉಪಸ್ಥಿತರಿದ್ದರು.