ಬೆಂಗಳೂರು:
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಭೂ ಪರಿಹಾರ ವಿತರಿಸುವ ವಿಶೇಷ ಭೂಸ್ವಾಧೀನಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನ ಅಧಿವೇಶನದಲ್ಲಿ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ನಿಯಮ 330ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಧಾರವಾಡ ಮತ್ತು ರಾಮನಗರ ವ್ಯಾಪ್ತಿಯ ಕೆಲವು ಕೈಗಾರಿಕಾ ಪ್ರದೇಶಗಳಲ್ಲಿ ಒಂದೇ ಜಮೀನಿಗೆ ಎರಡು ಬಾರಿ ಭೂ ಪರಿಹಾರ ನೀಡಿರುವ ಲೋಪ ಕಂಡುಬಂದಿದೆ ಎಂದರು.
ಈ ಸಂಬಂಧ ಸಂಬಂಧಿಸಿದ ಭೂಸ್ವಾಧೀನಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಶಿಕ್ಷೆಯಾಗಿ ಸೆರೆವಾಸವೂ ಒಳಗೊಂಡಿದೆ. ಜೊತೆಗೆ, ಭೂಮಾಲೀಕರಿಂದ ಹೆಚ್ಚುವರಿ ಪಾವತಿಸಲಾದ ಹಣವನ್ನು ವಾಪಸ್ ಪಡೆಯಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂತಹ ಲೋಪಗಳು ಮರುಕಳಿಸದಂತೆ ಜಾಗರೂಕತೆಯಿಂದ ಪರಿಹಾರ ವಿತರಣೆ ಮಾಡಲು ಸಂಬಂಧಪಟ್ಟವರಿಗೆ ಹಲವು ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.