ಬೆಂಗಳೂರು: ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ನಡೆಯುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣ ಅಕ್ರಮವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ, ಈ ಕ್ರಮವನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಆರ್.ಅಶೋಕ, “ಗ್ರೇಟರ್ ಬೆಂಗಳೂರು ಯೋಜನೆಯಡಿ ಕಾಂಗ್ರೆಸ್ ಸರ್ಕಾರ 9,600 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಇದರಲ್ಲಿ 6,500 ಎಕರೆ ಫಲವತ್ತಾದ ಕೃಷಿಭೂಮಿಯಾಗಿದೆ. ಈ ಪ್ರದೇಶದಲ್ಲಿ 10 ಲಕ್ಷಕ್ಕೂ ಅಧಿಕ ತೆಂಗಿನ ಮತ್ತು ಮಾವಿನ ಮರಗಳಿವೆ. ಪ್ರತಿದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದು ಕೆಎಂಎಫ್‌ಗೆ ತಲುಪುತ್ತಿದೆ. 3,000ಕ್ಕೂ ಹೆಚ್ಚು ರೈತರು ಮತ್ತು ಕಾರ್ಮಿಕರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಆದರೆ, ಈ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸೈಟುಗಳನ್ನು ರಚಿಸಲಾಗುತ್ತಿದೆ,” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹೌಸಿಂಗ್ ಬೋರ್ಡ್ ಈಗಾಗಲೇ 560 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಸೈಟುಗಳನ್ನು ರಚಿಸಿದೆಯಾದರೂ, ಯಾರೂ ಇಲ್ಲಿ ಮನೆಗಳನ್ನು ಕಟ್ಟಿಲ್ಲ. ಕೆಂಪೇಗೌಡ ಬಡಾವಣೆ ಮತ್ತು ಶಿವರಾಮ ಕಾರಂತ ಬಡಾವಣೆಗಳಲ್ಲಿ ಈಗಲೂ ಸೈಟುಗಳು ಖಾಲಿಯಾಗಿವೆ. “ಇಷ್ಟು ಖಾಲಿ ಸೈಟುಗಳಿರುವಾಗ, ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ರೈತರಿಗೆ ಮಾಡುವ ದೊಡ್ಡ ವಂಚನೆಯಾಗಿದೆ,” ಎಂದು ಅವರು ಕಿಡಿಕಾರಿದರು.
“ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ರೈತರ ಬೇಡಿಕೆಗೆ ಮಣಿದು ಭೂ ಸ್ವಾಧೀನ ಕೈಬಿಟ್ಟಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಲಾಬಿಯೊಂದಿಗೆ ಕೈಜೋಡಿಸಿ ಜಮೀನು ಲೂಟಿಗೆ ಮುಂದಾಗಿದೆ. ರಾಮನಗರದಲ್ಲಿ ಸೈಟುಗಳಿಗೆ ಯಾರೂ ಬೇಡಿಕೆ ಇಟ್ಟಿಲ್ಲ. ಈಗಾಗಲೇ ರಚಿಸಲಾದ ಸೈಟುಗಳು ಖಾಲಿಯಾಗಿವೆ. ಇದು ಸಂಪೂರ್ಣ ಅಕ್ರಮ,” ಎಂದು ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ ಅವರು, “ಸರ್ಕಾರ ಈ ಭೂ ಸ್ವಾಧೀನ ಕ್ರಮವನ್ನು ತಕ್ಷಣ ಸ್ಥಗಿತಗೊಳಿಸಬೇಕು. ರೈತರ ಜೊತೆ ಚರ್ಚಿಸಿ, ಅವರ ಆಕ್ಷೇಪಗಳನ್ನು ಆಲಿಸಬೇಕಿತ್ತು. ಬದಲಿಗೆ, ದೌರ್ಜನ್ಯದ ಮೂಲಕ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಇದು ರೈತರ ಬದುಕಿಗೆ ಕೊಳ್ಳಿಯಿಡುವ ಕೆಲಸ,” ಎಂದು ಆರೋಪಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಿನೋಟಿಫಿಕೇಶನ್ ಮಾಡದೆ ಈ ಯೋಜನೆಯನ್ನು ಕೈಬಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. “ಬಹುತೇಕ ರೈತರು ತಮ್ಮ ಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸಿದ್ದಾರೆ. ಸರ್ಕಾರ ಈ ರೈತರ ಧ್ವನಿಗೆ ಕಿವಿಗೊಡಬೇಕು. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇವೆ,” ಎಂದು ಆರ್.ಅಶೋಕ ಭರವಸೆ ನೀಡಿದರು. ಈ ಕುರಿತು ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿರುವುದಾಗಿಯೂ ಅವರು ತಿಳಿಸಿದರು.
“ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಿ, ಈ ಭೂಮಿಯನ್ನು ಯಾವ ಝೋನ್‌ಗೆ ಸೇರಿಸಬೇಕು ಎಂಬುದನ್ನು ನಿರ್ಧರಿಸಬೇಕು,” ಎಂದು ಅವರು ಸಲಹೆ ನೀಡಿದರು.