ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಕಮೀಷನ್ ಆರೋಪಗಳ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ರವಾನಿಸಿರುವ ರವಿಕುಮಾರ್, ತಮ್ಮ ವಿರುದ್ಧ ತೇಜೋವಧೆ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
2024ರ ಮಾರ್ಚ್‌ನಿಂದ ಭೋವಿ ನಿಗಮದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್, ತಾವು ಸର್ಕಾರದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. “ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಹಿಂದಿನಿಂದ ಬಂದಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದೇನೆ,” ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ತಮ್ಮ ವಿರುದ್ಧ ತಾಂತ್ರಿಕ ಸಲಕರಣೆಗಳನ್ನು ಬಳಸಿ ತೇಜೋವಧೆ ಪ್ರಯತ್ನ ನಡೆದಿದೆ ಎಂದು ರವಿಕುಮಾರ್ ಆರೋಪಿಸಿದ್ದಾರೆ. “ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ, ಎಫ್‌ಎಸ್‌ಎಲ್‌ಗೆ ಕಳುಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು,” ಎಂದು ಅವರು ರಾಜೀನಾಮೆ ಪತ್ರದಲ್ಲಿ ಕೋರಿದ್ದಾರೆ.
ರವಿಕುಮಾರ್ ಅವರ ರಾಜೀನಾಮೆಯಿಂದ ಭೋವಿ ನಿಗಮದಲ್ಲಿ ಹೊಸ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಈ ಆರೋಪಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.