ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜುಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮು ಗಲಭೆ ಸೃಷ್ಟಿಸುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದಾರೆ.
“ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸಬೇಕು, ದ್ವೇಷ ಯಾವುದೇ ಕಾರಣಕ್ಕೂ ಇರಬಾರದು ಎಂದು ಹೇಳಿದರು. ಕರಾವಳಿಯಲ್ಲಿ ಅನಗತ್ಯವಾಗಿ ಕೋಮುದಳ್ಳುರಿ ಸೃಷ್ಟಿಸುವವರ ವಿರುದ್ಧ ಸರ್ಕಾರ ನಿಗಾ ಇಡಲಿದೆ. ಶೀಘ್ರದಲ್ಲೇ ಕೋಮು ಸಾಮರಸ್ಯ ನಿಯಂತ್ರಣ ಪಡೆ ರಚಿಸಲಾಗುವುದು ಎಂದು ಅವರು ಹೇಳಿದರು.
ಈ ನಡುವೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಂತಿ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ಇಲ್ಲವಾದಲ್ಲಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇನ್ನು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರ ಕೋಮುಗಲಭೆ ಸೃಷ್ಟಿಸುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರವು ಕೋಮು ಸಾಮರಸ್ಯ ಕಾಪಾಡಲು ಮತ್ತು ಶಾಂತಿ ಸ್ಥಾಪಿಸಲು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಕೋಮು ಗಲಭೆಗಳನ್ನು ನಿಯಂತ್ರಿಸಲು ವಿಶೇಷ ಪಡೆ ರಚನೆ, ಕಾನೂನು ಉಲ್ಲಂಘಕರ ವಿರುದ್ಧ ಕಠಿಣ ಕ್ರಮ, ಮತ್ತು ಶಾಂತಿಯುತ ಪರಿಸರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.