ಮಂಗಳೂರು: ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ವಿರುದ್ಧ ಎತ್ತಲಾಗಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಇದನ್ನು ಅಸೂಯೆ ಮತ್ತು ದೃಷ್ಟಿ ದೋಷದಿಂದ ಕೂಡಿದ್ದೆಂದು ಆರೋಪಿಸಿ, ಆರೋಪಗಳಿಗೆ ಬರಹ ರೂಪದಲ್ಲಿ ಸಾಕ್ಷ್ಯ ನೀಡಿ ಚರ್ಚಿಸಲು ಸಿದ್ಧರಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
“ನೀವು ಹೇಳಿರುವ ಭ್ರಷ್ಟಾಚಾರದ ಆರೋಪ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲ ರೋಗಕ್ಕೆ ಮದ್ದಿದೆ, ಆದರೆ ಅಸೂಯೆಗೆ ಮದ್ದಿಲ್ಲ. ಹೊಸದಾಗಿ ಮನೆ ಕಟ್ಟುವಾಗ ಅಥವಾ ಚಂದದ ಬಿಲ್ಡಿಂಗ್ ಕಟ್ಟುವಾಗ ದೃಷ್ಟಿ ಬೀಳಬಾರದು ಎಂದು ದೃಷ್ಟಿ ಗೊಂಬೆ ಹಾಕುತ್ತೇವೆ. ಅದೇ ರೀತಿ ಕರ್ನಾಟಕ ಶಾಸಕಾಂಗದ ಬಗ್ಗೆ ರಾಜ್ಯದಲ್ಲಿ, ದೇಶದಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಗೌರವ ವ್ಯಕ್ತವಾಗುತ್ತಿದೆ. ಇಷ್ಟೆಲ್ಲ ಒಳ್ಳೆಯ ಕಾರ್ಯಗಳು ನಡೆಯುತ್ತಿರುವಾಗ ಅದಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪಗಳನ್ನು ಮಾಡಲಾಗಿದೆ” ಎಂದು ಖಾದರ್ ಹೇಳಿದರು.
ಅಭಿವೃದ್ಧಿ ಕಾರ್ಯಗಳು ನಿರಂತರ ಹಂತ ಹಂತವಾಗಿ ಮುಂದುವರಿಯುತ್ತವೆ ಎಂದ ಅವರು, ಯಾರಿಗಾದರೂ ಸಂಶಯವಿದ್ದಲ್ಲಿ ನಾಳೆ ಬೆಳಗ್ಗೆ ತಮ್ಮ ಕಚೇರಿಯಲ್ಲಿ ಲಭ್ಯರಿರುವುದಾಗಿ ತಿಳಿಸಿದರು. “ಯಾರಿಗಾದರೂ ಏನಾದರೂ ಕೇಳಬೇಕಿದ್ದಲ್ಲಿ ಅಥವಾ ಸಂಶಯವಿದ್ದಲ್ಲಿ ಬರಹ ರೂಪದಲ್ಲಿ ನೀಡಬೇಕು. ರೈಟಿಂಗ್‌ನಲ್ಲಿ ನನಗೆ ಕೊಡಬೇಕು. ಅದಕ್ಕೆ ಸಕಾರಾತ್ಮಕ ಉತ್ತರ ದೊರೆಯಲಿದೆ. ಆ ಬಗ್ಗೆ ಸಕಾರಾತ್ಮಕ ಚರ್ಚೆಗೆ ನಾನು ಸಿದ್ಧನಿದ್ದೇನೆ. ನನ್ನ ಆಲೋಚನೆಗೂ ಗೌರವ ಬರಬೇಕು, ಅವರ ಆಲೋಚನೆ ಕೂಡ ಅದೇ ಇರಬಹುದು. ಎಲ್ಲರೂ ಜವಾಬ್ದಾರಿ ಸ್ಥಾನದಲ್ಲಿ ಇರುವವರು” ಎಂದು ಖಾದರ್ ಒತ್ತಿ ಹೇಳಿದರು.
ಎಲ್ಲೆಲ್ಲೋ ಕುಳಿತು ಮಾತಾಡುವುದಕ್ಕೆ ಉತ್ತರ ನೀಡಲು ಸಾಧ್ಯವಿಲ್ಲ ಎಂದ ಅವರು, ಬಾಯಲ್ಲಿ ಹೇಳಿದ್ದಕ್ಕೆ ಏನು ಮಾಡಲಿ ಎಂದು ಪ್ರಶ್ನಿಸಿದರು. “ಅವರು ಹೇಳಿದ ವಿಚಾರವನ್ನು ರೈಟಿಂಗ್‌ನಲ್ಲಿ ಕೊಟ್ರೆ ಅದಕ್ಕೆ ಉತ್ತರ ಕೊಡುತ್ತೇನೆ. ಎಲ್ಲಿಯೋ ಕುಳಿತು ಆರೋಪ ಮಾಡಿದ್ರೆ ಅದಕ್ಕೆ ಉತ್ತರ ಕೊಡಲು ನಾನು ಅವರ ಜನ ಅಲ್ಲ. ತನಿಖೆಗೆ ಕೊಡಬೇಕೇ ಬೇಡವೇ ಎಂಬುದು ನಾನೇ ತೀರ್ಮಾನಿಸುತ್ತೇನೆ. ವಿಷಯ ಹಿಂದೂ ಇಲ್ಲ ಮುಂದೂ ಇಲ್ಲ ಗೊತ್ತಿಲ್ಲದೆ ಹೇಳಿದರೆ ಅದಕ್ಕೆ ಉತ್ತರ ಕೊಡಲು ಆಗಲ್ಲ” ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ಬದ್ಧ ಸ್ಪೀಕರ್ ಸ್ಥಾನದಲ್ಲಿರುವುದರಿಂದ ರಾಜಕೀಯವಾಗಿ ಮಾತನಾಡದೇ ಇರಬೇಕು ಎಂದ ಅವರು, ಪ್ರತಿಪಕ್ಷದ ಮಿತ್ರರಿಗೆ ಎಲ್ಲ ಸವಲತ್ತುಗಳನ್ನು ನೀಡುವುದು ತಮ್ಮ ಕರ್ತವ್ಯ ಎಂದು ಹೇಳಿದರು. “ಇಂತಹ ಆರೋಪಗಳಿಂದ ನನಗೆ ಡ್ಯಾಮೇಜ್ ಆದರೂ ಅವರಿಗೆ ಸಂತೋಷವಾದರೆ ಆಗ್ಲಿ. ಅವರು ಅತ್ಯಂತ ಸಂತೋಷದಿಂದ ಇರಲಿ, ದಿನವೊಂದು ಮಾತಾಡಲಿ. ನನಗೆ ಯಾವುದೇ ಬೇಸರ ಇಲ್ಲ. ನನ್ನ ವಿರುದ್ಧ ಆರೋಪಗಳು ಮೊದಲಲ್ಲ, ರಾಜಕೀಯ ಜೀವನದುದ್ದಕ್ಕೂ ಇದೇ ರೀತಿ ಆರೋಪಗಳು ಬಂದಿವೆ. ಮೊದಲ ಬಾರಿಗೆ ಶಾಸಕನಾದಾಗಿನಿಂದಲೂ ಈ ಮಾತುಗಳನ್ನು ಕೇಳಿದ್ದೇನೆ” ಎಂದು ಖಾದರ್ ತಿಳಿಸಿದರು.
ರಾಜ್ಯ ಶಾಸಕಾಂಗದ ಗೌರವವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿದ ಸ್ಪೀಕರ್, ಎಲ್ಲಾ ರೈಟಿಂಗ್‌ಗಳನ್ನು ಪರಿಶೀಲಿಸಿ ವಿಚಾರ ಮಾಡುವುದಾಗಿ ಹೇಳಿದರು.












