ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿಯವರ ಮಹತ್ವದ ಕನಸು ಬಜೆಟ್ ಅಧಿವೇಶನದಲ್ಲಿ ನನಸಾಯಿತು..
2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉಭಯ ಸದನಗಳಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮಂಡಿಸಿದರು. ವಿಧಾನಸಭೆಯಲ್ಲಿ ನಿನ್ನೆ ಅಂಗೀಕಾರವಾಗಿ ಬಂದಿದ್ದ ವಿಧೇಯಕವನ್ನು ಇಂದು ವಿಧಾನಪರಿಷತ್ ನಲ್ಲಿ ಅಧಿಕೃತವಾಗಿ ಅಂಗೀಕರಿಸುವ ಮೂಲಕ ಮಂಡ್ಯ ಕೃಷಿ ವಿಶ್ವ ವಿದ್ಯಾಲಯಕ್ಕೆ ಚಾಲನೆ ಸಿಕ್ಕಂತಾಯಿತು..
ಮಂಡ್ಯ ಜಿಲ್ಲೆ, ವಿ.ಸಿ ಫಾರಂನಲ್ಲಿ ನೂತನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ಉಭಯ ಸದನಗಳಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರ ಆಗೋ ಮೂಲಕ ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದೆ.
2024-25ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ-42ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದ ಒಂದು ವರ್ಷದೊಳಗೆ ವಿವಿ ಪ್ರಾರಂಭಕ್ಕೆ ಇದೀಗ ಹಸಿರು ನಿಶಾನೆ ದೊರಕಿದೆ. ಕೃಷಿ ಸಚಿವರ ವಿಶೇಷ ಕಾಳಜಿ, ನಿರಂತರ ಪರಿಶ್ರಮ ಶೀಘ್ರವೇ ಫಲ ನೀಡಿದೆ.
ಇದಕ್ಕಾಗಿ ಚಲುವರಾಯಸ್ವಾಮಿರವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಂಡ್ಯ ಕೃಷಿ ವಿಶ್ವವಿದ್ಯಾಲಯ: ನನ್ನ ಕನಸು ಸಾಕಾರಗೊಂಡ ಕ್ಷಣ!
ಈ ದಿನ ನನ್ನ ಜೀವನದ ಅತ್ಯಂತ ಸಂಭ್ರಮದ ಕ್ಷಣವಾಗಿದೆ. ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳು 2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ನೀಡಿದ್ದು ನನಗೆ ಅಪಾರ ಹರ್ಷ ಮತ್ತು ಆನಂದವನ್ನು ಉಂಟುಮಾಡಿದೆ.
ನನ್ನ ಜನ್ಮಭೂಮಿ, ನನ್ನ ಊರು ಮಂಡ್ಯ – ಕಾವೇರಿ ಜಲಾನಯನ ಪ್ರದೇಶದಲ್ಲಿ ಇರುವ ಈ ಪುಣ್ಯಭೂಮಿಯು ಕೃಷಿಕರ ಕಲ್ಪವೃಕ್ಷವಾಗಬೇಕು ಎಂಬುದು ನನ್ನ ಜೀವನದ ಮಹತ್ವದ ಕನಸಾಗಿತ್ತು. ಆ ಕನಸು ಇಂದು ನನಸಾಗುವ ಹಾದಿಯಲ್ಲಿ ಸಾಗುತ್ತಿದೆ.
ಜಿಲ್ಲೆಯಲ್ಲಿ ಒಂದು ಕೃಷಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು ಎನ್ನುವ ನನ್ನ ಕನಸು ಹಾಗೂ ನನ್ನ ಜನತೆಯ ಬಹು ಕಾಲದ ಬೇಡಿಕೆ ಈಡೇರುತ್ತಿದೆ. ನನ್ನ ಮಂಡ್ಯ ಜಿಲ್ಲೆಯ ಜನತೆ ಹಾಗೂ ರಾಜ್ಯದ ಎಲ್ಲಾ ಕೃಷಿಕರ ಅಭ್ಯುದಯದ ಗುರಿಯೊಂದಿಗೆ ಈ ಕೃಷಿ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಲಿದ್ದು, ಕೃಷಿಯಲ್ಲಿ ನಾವೀನ್ಯತೆಯನ್ನು ಕಂಡುಕೊಳ್ಳಲು, ವಿಜ್ಞಾನವನ್ನು ಅಳವಡಿಸಲು, ಮುಂದಿನ ಪೀಳಿಗೆಗೆ ಕೃಷಿ ಕ್ಷೇತ್ರದ ಬಗ್ಗೆ ಇನ್ನೂ ಹೆಚ್ಚಿನ ಒಲವನ್ನು ಬೆಳೆಸಲು ನೆರವಾಗಲಿದೆ.
“ಕೃಷಿ ಪರಂಪರೆಗೆ ಹೆಸರಾಗಿರುವ ನಮ್ಮ ಮಂಡ್ಯ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ಕೃಷಿ ಸಚಿವನಾಗಿ ಆಯ್ಕೆಯಾಗಿ ಇಂತಹ ಒಂದು ಸತ್ಕಾರ್ಯ ಮಾಡುವ ಸದವಕಾಶ ದೊರಕಿರುವುದು ನನ್ನ ಸೌಭಾಗ್ಯ. ನಾಡಿನ ಅನ್ನದಾತರ ಶ್ರೇಯೋಭಿವೃದ್ಧಿಗೆ ನನ್ನ ಶ್ರಮ ನಿರಂತರವಾಗಿರಲಿದೆ”, ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿಕೆ ನೀಡಿದರು.