ನವದೆಹಲಿ: ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ ಮಂಡ್ಯ ಜಿಲ್ಲೆ ಸೇರಿದಂತೆ ಬೆಂಗಳೂರು-ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಗುರುವಾರ ಸಂಸತ್ ಭವನದಲ್ಲಿ ನಡೆದ ಈ ಸಭೆಯಲ್ಲಿ ಮಂಡ್ಯ ಜಿಲ್ಲೆಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ನಿಲುಗಡೆಗಳು, ಮಾರ್ಗಗಳ ಮೇಲ್ದರ್ಜೆ ಮತ್ತು ಹೊಸ ರೈಲು ಮಂಜೂರಾತಿಗೆ ಸಂಬಂಧಿಸಿದಂತೆ ಹಲವು ಮನವಿಗಳನ್ನು ಸಲ್ಲಿಸಲಾಯಿತು.
ಮುಖ್ಯವಾಗಿ ಬೆಂಗಳೂರು-ಮಂಗಳೂರು-ಮುರುಡೇಶ್ವರ ನಡುವೆ ಸಂಚರಿಸುವ ರೈಲು (ಸಂಖ್ಯೆ 16585) ಮಂಡ್ಯ ಮತ್ತು ಮದ್ದೂರು ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಬಗ್ಗೆ ಚರ್ಚಿಸಲಾಯಿತು. ಈ ಬೇಡಿಕೆಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ತ್ವರಿತ ಕ್ರಮ ವಹಿಸುವ ಭರವಸೆ ನೀಡಿದರು.
ಮದ್ದೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆಯೂ ಮನವಿ ಮಾಡಲಾಯಿತು. ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ನಿಲ್ದಾಣವನ್ನು ಆಧುನೀಕರಿಸಿ ಅಭಿವೃದ್ಧಿಪಡಿಸಬೇಕೆಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಇನ್ನಿತರ ಮುಖ್ಯ ಬೇಡಿಕೆಗಳು:
- ಮಂಡ್ಯ-ಮೇಲುಕೋಟೆ ರಸ್ತೆಯ ವಿ.ಸಿ. ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣ.
- ದೊಡ್ಡಬ್ಯಾಡರಹಳ್ಳಿಯಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣ.
- ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ.
- ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಮೇಲ್ದರ್ಜೆಗೆ ಏರಿಸುವುದು.
- ಚನ್ನಪಟ್ಟಣದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ.
- ಚಾಮುಂಡಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16215) ಬೋಗಿಗಳ ಸಾಮರ್ಥ್ಯ ಹೆಚ್ಚಿಸುವುದು.
- ನೊಡೇಕೊಪ್ಪಲು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ.
- ರಾಮನಗರ-ಚನ್ನಪಟ್ಟಣ ನಡುವಿನ ಲೆವೆಲ್ ಕ್ರಾಸಿಂಗ್ (ಸಂಖ್ಯೆ 44)ನಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಾಣ.
ಹೊಸ ರೈಲು ಮಾರ್ಗಗಳಿಗೆ ಮನವಿ ಮಾಡಿದ್ದು, ಮಂಗಳೂರು-ಹಾಸನ ಮಾರ್ಗವಾಗಿ ಮುಂಬಯಿ-ಬೆಂಗಳೂರು ನಡುವೆ ಹೊಸ ರೈಲು ಮಂಜೂರಾತಿ ಮತ್ತು ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗಕ್ಕೆ ಅನುಮೋದನೆ ನೀಡುವಂತೆ ಕೋರಲಾಯಿತು. ಹೆಜ್ಜಾಲ-ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಯಳಂದೂರು-ಚಾಮರಾಜನಗರ ಮಾರ್ಗವು ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಸಚಿವರು ವಿವರಿಸಿದರು.

ಅಲ್ಲದೆ ಕೊಪ್ಪಳ ಜಿಲ್ಲೆಯ ಹೊಸ ಬ್ರಾಡ್ ಗೇಜ್ ರೈಲು ಮಾರ್ಗಗಳಿಗೆ ಅನುದಾನ, ಹಾಸನದ ಸಕಲೇಶಪುರ ರೈಲು ನಿಲ್ದಾಣ ಅಭಿವೃದ್ಧಿ ಮತ್ತು ಹೊಸಕೋಟೆ ತಾಲೂಕಿನ ತಿಂಡ್ಲು ಗ್ರಾಮದ ಬಳಿ ಮ್ಯಾಜಿಕ್ ಬಾಕ್ಸ್ ಅಳವಡಿಕೆ ಸೇರಿದಂತೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಲಾಯಿತು.
ಈ ಎಲ್ಲಾ ಬೇಡಿಕೆಗಳಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ತ್ವರಿತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಬುಧವಾರವೂ ಇದೇ ರೀತಿ ರೈಲ್ವೆ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಈ ಚರ್ಚೆಯಿಂದ ಮಂಡ್ಯ ಜಿಲ್ಲೆಯ ರೈತರು, ಪ್ರಯಾಣಿಕರು ಮತ್ತು ವ್ಯಾಪಾರಿಗಳಿಗೆ ದೊಡ್ಡ ಸೌಲಭ್ಯ ದೊರೆಯಲಿದೆ ಎಂಬ ನಿರೀಕ್ಷೆಯಿದೆ.












