ಬೆಂಗಳೂರು: ಮಂಡ್ಯ ವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೆರಿಸುವುದರ ಜೊತೆಗೆ ಅದರ ನವೀಕರಣಕ್ಕೆ ಅಗತ್ಯ ಅನುದಾನವನ್ನು ಒದಗಿಸಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೇಲ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ, ಮಂಡ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಅಭಿವೃದ್ಧಿ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು. ಈ ವೇಳೆ, ಉಭಯ ಸಚಿವರು ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿ ಅಗತ್ಯ ನೆರವು ನೀಡುವ ಭರವಸೆ ನೀಡಿದರು.

ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ ಹೆಚ್ಚಳ
ಪ್ರಸ್ತುತ, 400 ಹಾಸಿಗೆಗಳ ಅನುಮೋದನೆ ಇರುವ ಆಸ್ಪತ್ರೆಯಲ್ಲಿ 800ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ, ಇದನ್ನು 850 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸುವ ಅಗತ್ಯವಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಈ ಕುರಿತು ಸ್ಪಂದಿಸಿದ ವೈದ್ಯಕೀಯ ಶಿಕ್ಷಣ ಸಚಿವರು, ಪರಿಸರ ಇಲಾಖೆಯ ಪರವಾನಗಿಯನ್ನು ನವೀಕರಿಸಿ ಮೇಲ್ದರ್ಜೆಗೆರಿಸಲು ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ವಿದ್ಯಾರ್ಥಿ ಸಂಖ್ಯೆಯಲ್ಲಿ ಹೆಚ್ಚಳ
ವೈದ್ಯಕೀಯ ಕಾಲೇಜಿನಲ್ಲಿ ಪ್ರಸ್ತುತ 200 ವಿದ್ಯಾರ್ಥಿಗಳ ಪ್ರವೇಶ ಅವಕಾಶವಿದ್ದು, ಅದನ್ನು 250 ಕ್ಕೆ ಹೆಚ್ಚಿಸಲು ಕೃಷಿ ಸಚಿವರು ಮನವಿ ಮಾಡಿದರು.
ಆಸ್ಪತ್ರೆಯ ಸುಧಾರಣೆ ಮತ್ತು ಹೊಸ ಸೌಲಭ್ಯಗಳು
ತುರ್ತು ಚಿಕಿತ್ಸಾ ಘಟಕ, ಲಘು ಶಸ್ತ್ರಚಿಕಿತ್ಸಾ ಘಟಕ, ಕ್ಯಾನ್ಸರ್ ಚಿಕಿತ್ಸಾ ಘಟಕ, ಲಾಂಡ್ರಿ ಸೌಲಭ್ಯ, ಹೆಚ್ಚುವರಿ ಕೊಠಡಿಗಳು ಹಾಗೂ ವಿದ್ಯುತ್ ಪೂರೈಕೆಯಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಮುಖರು ಭಾಗವಹಿಸಿದ ಸಭೆ
ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ರವಿಕುಮಾರ್ ಗಣಿಗರ್, ಜಿಲ್ಲಾಧಿಕಾರಿ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹಮದ್ ಮೊಹಿಸಿನ್ ಹಾಗೂ ಮಂಡ್ಯ ವೈದ್ಯಕೀಯ ಕಾಲೇಜು ನಿರ್ದೇಶಕರೂ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದರು.
ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಮಂಡ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೌಲಭ್ಯಗಳು ಉತ್ತಮಗೊಳ್ಳಲಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಸಮರ್ಪಕ ಆರೋಗ್ಯ ಸೇವೆ ಲಭ್ಯವಾಗಲಿದೆ.