ಬೆಂಗಳೂರು: ರಾಜ್ಯದಲ್ಲಿ ವಿರಳಾತಿ ವಿರಳ (ಅಪರೂಪದ) ಆನುವಂಶಿಕ ಕಾಯಿಲೆಗೆ ತುತ್ತಾಗಿರುವ ಮಕ್ಕಳ ಚಿಕಿತ್ಸೆಗಾಗಿ ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ ನೆರವು ನೀಡಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮನವಿ ಮಾಡಿದರು.
ಲೈಸೊಸಮಲ್ ಸ್ಟೋರೇಜ್ ಡಿಸ್‌ಆರ್ಡರ್ (LSD) ಎಂಬ ಅಪರೂಪದ ಕಾಯಿಲೆ ಗುಂಪಿಗೆ ಸೇರಿದ ಗೌಷೆ, ಎಂಪಿಎಸ್, ಪಾಂಪೆ ಮುಂತಾದ ರೋಗಗಳಿಂದ ರಾಜ್ಯದ ಹಲವು ಮಕ್ಕಳು ಬಳಲುತ್ತಿದ್ದಾರೆ. ಈ ರೋಗಗಳ ಚಿಕಿತ್ಸೆಗೆ ವರ್ಷಕ್ಕೆ ಕನಿಷ್ಠ 50 ಲಕ್ಷ ರೂ. ಮತ್ತು ಗರಿಷ್ಠ ಕೋಟಿಗೂ ಮೀರುವ ವೆಚ್ಚ ತಗಲಿದೆ.

ಈ ಪೈಕಿ 22 ಮಕ್ಕಳು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಈವರೆಗೆ ರಾಜ್ಯ ಸರ್ಕಾರದಿಂದ 76 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದೀಗ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ.
ಡಾ. ಪಾಟೀಲ್ ಅವರು ತಿಳಿಸಿದಂತೆ, ಕರ್ನಾಟಕ ಸರ್ಕಾರ ಅಪರೂಪದ ಕಾಯಿಲೆಗಳಿಗೆ ಪರಿಣಾಮಕಾರಿ ನೀತಿ ರೂಪಿಸಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರೂಪ ಕಾಯಿಲೆ ನೀತಿಯಡಿ (NPRD) ಅನುದಾನ ಪಡೆಯುತ್ತಿದೆ. ಇಂದಿರಾಗಾಂಧಿ ಮಕ್ಕಳ ಸಂಸ್ಥೆ ‘ರೆರ್ ಡಿಸೀಸ್’ ಚಿಕಿತ್ಸೆಗೆ ದೇಶದ 13 ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಕೇಂದ್ರ ಮಟ್ಟದ ವಿಶೇಷ ಚಿಕಿತ್ಸೆ ಲಭ್ಯವಿದೆ.
ಕಾರ್ಪೊರೇಟ್ ಕಂಪನಿಗಳ ದತ್ತತೆ ಮತ್ತು ಧನಸಹಾಯಕ್ಕೆ ಮನವಿ
ಚಿಕಿತ್ಸೆಯ ದುಡಿಮೆಗೆ ನೆರವಾಗಲು ಕಾರ್ಪೊರೇಟ್ ಸಂಸ್ಥೆಗಳು CSR ಯೋಜನೆಯಡಿ ಧನಸಹಾಯ ನೀಡಬೇಕೆಂಬ ಸಚಿವರ ಮನವಿ ಮಾಡಿದ್ದು, ಆ ಮೂಲಕ ಕಾರ್ಪೊರೇಟ್ ಸಂಸ್ಥೆಗಳು ಒಂದೊಂದು ಮಗುವನ್ನು ದತ್ತು ತೆಗೆದುಕೊಂಡಂತೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಆಹ್ವಾನ ನೀಡಿದ್ದಾರೆ.
ಇದಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಇದೀಗ ಕಂಪನಿಗಳಿಗೆ ಅಧಿಕೃತ ಮನವಿ ಸಲ್ಲಿಸಿದ್ದು, ಇಂಥ ಮಕ್ಕಳ ಬಾಳಲ್ಲಿ ಬೆಳಕು ತರಲು ಸಮಾಜದ ಎಲ್ಲ ವರ್ಗಗಳಿಂದ ಸಹಕಾರ ನಿರೀಕ್ಷಿಸಲಾಗಿದೆ.
ಬಾಕ್ಸ್:
ಚಿಕಿತ್ಸಾ ವೆಚ್ಚ ಭರಿಸಲಿ, ದತ್ತು ಪಡೆಯಲಿ
ಲೈಸೊಸಮಲ್ ಸ್ಟೋರೇಜ್ ಡಿಸ್‌ಆರ್ಡರ್ ರೋಗಗಳಿಂದ ಬಳಲುತ್ತಿರುವ 22 ಮಕ್ಕಳಿಗೆ ವರ್ಷಕ್ಕೆ 12-13 ಕೋಟಿ ರೂ. ಅನುದಾನ ಅಗತ್ಯ. ಕಾರ್ಪೊರೇಟ್ ಕಂಪನಿಗಳು ಇದಕ್ಕಾಗಿ ನೆರವಾಗುವ ಮೂಲಕ ಒಂದು ಮಗುವನ್ನು ದತ್ತು ತೆಗೆದುಕೊಂಡಂತೆ ಚಿಕಿತ್ಸೆ ಕೊಡಿಸಲು ಸಾಧ್ಯ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
–ಪರಿಶಿಷ್ಟ