ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನೂತನ ಜಿಟಿಟಿಸಿ (ಗವರ್ನಮೆಂಟ್ ಟೂಲ್ ರೂಂ ಆಂಡ್ ಟ್ರೈನಿಂಗ್ ಸೆಂಟರ್) ಕೇಂದ್ರಗಳ ಸ್ಥಾಪನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾಮಗಾರಿಗಳನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಬಾರ್ಡ್ ಸಹಯೋಗದೊಂದಿಗೆ ಮಧುಗಿರಿ ಮತ್ತು ಇಂಡಿ ಹಾಗೂ ಕೆ.ಕೆ.ಆರ್.ಡಿ.ಬಿ ಮ್ಯಾಕ್ರೋ ಅನುದಾನದಡಿ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಹೊಸ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ಸ್ಥಳ ಗುರುತಿಸಲಾಗಿದೆ. ಈ ಕೇಂದ್ರಗಳ ಕಟ್ಟಡ ಕಾಮಗಾರಿಗೆ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಆದೇಶಿಸಿದರು. ಇದೇ ರೀತಿ ಸಂಡೂರು ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿಯೂ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
ಪ್ರಸ್ತುತ ರಾಜ್ಯದಲ್ಲಿ ೩೨ ಜಿಟಿಟಿಸಿ ಕೇಂದ್ರಗಳಿವೆ. ಈ ಹಿನ್ನೆಲೆಯಲ್ಲಿ ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ಹೊಸದಾಗಿ ೭ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಈ ಎಲ್ಲ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ಮುಖ್ಯಮಂತ್ರಿಗಳ ಆದೇಶವಾಗಿದೆ.
ಸಭೆಯಲ್ಲಿ ಗಮನ ಸೆಳೆದ ಪ್ರಮುಖ ಅಂಶಗಳು:
- ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಮೂಲಕ ಹೆಚ್ಚಿನ ಉದ್ಯೋಗ ಒದಗಿಸುವಲ್ಲಿ ಜಿಟಿಟಿಸಿ ಯಶಸ್ವಿಯಾಗಿದೆ.
- ಜಿಟಿಟಿಸಿ ಪ್ರವೇಶ ಸಾಮರ್ಥ್ಯವನ್ನು ಈಗಾಗಲೇ ೬ ಸಾವಿರಕ್ಕೆ ಹೆಚ್ಚಿಸಲಾಗಿದೆ.
- ಇಲ್ಲಿಂದ ತರಬೇತಿ ಪಡೆದು ಹೊರಬಂದ ವಿದ್ಯಾರ್ಥಿಗಳಿಗೆ ವಿದೇಶಿ ಕಂಪನಿಗಳಲ್ಲಿಯೂ ಸೇರಿದಂತೆ ಶೇ.೧೦೦ರಷ್ಟು ಉದ್ಯೋಗ ಭರವಸೆ ಒದಗಿಸಲಾಗುತ್ತಿದೆ.
- ಉದ್ಯಮ ಮತ್ತು ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಹೊಸ ಕೋರ್ಸ್‌ಗಳನ್ನು ಪರಿಚಯಿಸಬೇಕು.
- ಜಿಟಿಟಿಸಿ ಉತ್ಪಾದನಾ ಘಟಕಗಳಲ್ಲಿ ಇಸ್ರೋದ ಚಂದ್ರಯಾನ ಲೂನಾರ್ ರೋವರ್ ಚಕ್ರ ಸೇರಿದಂತೆ ವಿವಿಧ ವೈಮಾನಿಕ ಉಪಕರಣಗಳ ಉತ್ಪಾದನೆ ನಡೆಯುತ್ತಿದೆ.
- ಜಪಾನ್, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳೊಂದಿಗೆ ಜಿಟಿಟಿಸಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಕಾರ್ಮಿಕ ಸಚಿವ ಶರಣಪ್ರಕಾಶ್ ರುದ್ರಗೌಡ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಕೌಶಲ್ಯಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.











