ಮೈಸೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನಕ್ಕೆ ಬದ್ಧರಾಗಿ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಖರ್ಗೆ ಅವರು ನಮಗೆ ಬುದ್ಧಿವಾದ ಮತ್ತು ಸಂದೇಶ ನೀಡಿದ್ದಾರೆ. ಅವರ ಮಾತಿಗೆ ನಾವೆಲ್ಲರೂ ಬದ್ಧರಾಗಿ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ರೇಸ್‌ನಿಂದ ಹೊರಗುಳಿದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ನಾನು ದೇವಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬಂದಿದ್ದೇನೆ, ರಾಜಕೀಯ ಚರ್ಚೆಗೆ ಅಲ್ಲ. ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಲು ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದರು.
“ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು ತಾಯಿಯ ಆಶೀರ್ವಾದ ಕೋರುತ್ತೇನೆ. ಹೀಗಾಗಿ ಕುಟುಂಬ ಸಮೇತವಾಗಿ ಬಂದು ರಾಜ್ಯ, ನೀವು ಮತ್ತು ನಮಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದು ಅವರು ಹೇಳಿದರು.
ನಿಮ್ಮ ಪ್ರಾರ್ಥನೆ ಫಲಿಸುವ ಸಮಯ ಸಮೀಪಿಸಿದೆಯೇ ಎಂದು ಕೇಳಿದಾಗ, “ನನಗೆ ಬೇಕಾದುದನ್ನು ಪ್ರಾರ್ಥನೆಯಲ್ಲಿ ಕೇಳಿದ್ದೇನೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
“ದುಃಖವನ್ನು ದೂರ ಮಾಡುವ ದೇವಿ ದುರ್ಗೆಯ ಆಶೀರ್ವಾದದಿಂದ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ವರ್ಷ ಒಳ್ಳೆಯ ಮಳೆ, ಶಾಂತಿ ಮತ್ತು ನೆಮ್ಮದಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಎಂದಿಗೂ ವಿಫಲವಾಗದು ಎಂಬುದು ನನ್ನ ನಂಬಿಕೆ” ಎಂದು ಶಿವಕುಮಾರ್ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.