ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಉಂಟಾದ ಅನಾಹುತಕ್ಕೆ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನವೇ ಕಾರಣ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಪರಿಹಾರ ಕಾರ್ಯಕ್ಕಾಗಿ ₹1,000 ಕೋಟಿ ಬಿಡುಗಡೆ ಮಾಡಿ, ಸಂತ್ರಸ್ತರ ನೆರವಿಗೆ ಧಾವಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾನುವಾರ ರಾತ್ರಿ 103 ರಿಂದ 130 ಮಿಮೀ ಮಳೆಯಿಂದಾಗಿ ನಗರದ ಹಲವು ಭಾಗಗಳು ಜಲಾವೃತವಾಗಿವೆ. ರಸ್ತೆಗಳು ಕೆರೆಯಂತಾಗಿದ್ದು, ನೂರಾರು ವಾಹನಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಸಾಯಿ ಬಡಾವಣೆ, ನಂದಗೋಕುಲ ಬಡಾವಣೆ ಸೇರಿದಂತೆ ಹಲವು ಕಾಲೋನಿಗಳು ನೀರಿನಲ್ಲಿ ಮುಳುಗಿವೆ. ಅನಾಥಾಶ್ರಮಕ್ಕೂ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಆಹಾರ, ಆಶ್ರಯದ ವ್ಯವಸ್ಥೆಯಿಲ್ಲದೆ ಸಂತ್ರಸ್ತರು ಪರದಾಡುತ್ತಿದ್ದರೂ, ಬಿಬಿಎಂಪಿಯಿಂದ ಸೂಕ್ತ ನೆರವು ಒದಗಿಲ್ಲ ಎಂದು ಆರ್. ಅಶೋಕ್ ದೂರಿದ್ದಾರೆ.
“ಬ್ರಾಂಡ್ ಬೆಂಗಳೂರು”ನ ನಿಜ ಬಣ್ಣ ಬಯಲು
ಕಾಂಗ್ರೆಸ್ ಸರ್ಕಾರದ “ಬ್ರಾಂಡ್ ಬೆಂಗಳೂರು” ಘೋಷಣೆಯನ್ನು ಟೀಕಿಸಿರುವ ಆರ್. ಅಶೋಕ್, ಒಂದೇ ಮಳೆಗೆ ಸರ್ಕಾರದ ದುರಾಡಳಿತದ ನೈಜ ಸ್ವರೂಪ ಜನರ ಮುಂದೆ ಬಂದಿದೆ ಎಂದಿದ್ದಾರೆ. ಸಂತ್ರಸ್ತರಿಗೆ ಸಹಾಯ ಮಾಡಬೇಕಿದ್ದ ಸಿಎಂ, ಡಿಸಿಎಂ ಮತ್ತು ಸಚಿವರು ಸಾಧನಾ ಸಮಾವೇಶದ ತಯಾರಿಯಲ್ಲಿ ಮಗ್ನರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ವಿಶೇಷವಾಗಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸಿರುವ ಅವರು, ಕಳೆದ ವರ್ಷ ಶಾಶ್ವತ ಪರಿಹಾರದ ಭರವಸೆ ನೀಡಿದ್ದ ಡಿಕೆಶಿ, ಯಾವುದೇ ಕ್ರಮ ಕೈಗೊಳ್ಳದೆ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂರು ವ್ಯಾಲಿಗ
ಹೆಬ್ಬಾಳ, ಕೋರಮಂಗಲ ಮತ್ತು ವೃಷಭಾವತಿ ವ್ಯಾಲಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂದಿನ ಮೂರು-ನಾಲ್ಕು ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕಾರ್ಯಪಡೆ ರಚಿಸಿ, ಸಹಾಯವಾಣಿ ಆರಂಭಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ. ನೀರು ನುಗ್ಗಿರುವ ಪ್ರತಿ ಮನೆಗೆ ಕನಿಷ್ಠ ₹1 ಲಕ್ಷ ಪರಿಹಾರ, ಎರಡು ತಿಂಗಳಿಗೆ ಸಾಕಾಗುವ ಆಹಾರ ಮತ್ತು ತಿಂಡಿಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ವೈಫಲ್ಯಕ್ಕೆ ಗೃಹ ಸಚಿವರೇ ಸಾಕ್ಷಿ
ಬಿಬಿಎಂಪಿಯ ಮುನ್ನೆಚ್ಚರಿಕೆ ಕೊರತೆಯೇ ಈ ಅನಾಹುತಕ್ಕೆ ಕಾರಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ ಹೇಳಿರುವುದನ್ನು ಉಲ್ಲೇಖಿಸಿರುವ ಆರ್. ಅಶೋಕ್, ಡಿಕೆ ಶಿವಕುಮಾರ್ ಅವರ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಸರ್ಟಿಫಿಕೇಟ್ ಬೇಕೇ ಎಂದು ಕಿಡಿಕಾರಿದ್ದಾರೆ. ರಾಜಕಾಲುವೆ, ಚರಂಡಿಗಳ ಹೂಳು ತೆಗೆಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಮತ್ತು ರಿಪೇರಿ ಕಾಮಗಾರಿಗಳ ಅವಶೇಷಗಳನ್ನು ತೆರವುಗೊಳಿಸಿದ್ದರೆ ಈ ಪರಿಸ್ಥಿತಿ ತಪ್ಪುತ್ತಿತ್ತು ಎಂದು ದೂರಿದ್ದಾರೆ.
ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ಅವಮಾನ
ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿಯದ ಸರ್ಕಾರದಿಂದಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಅವಮಾನಕ್ಕೊಳಗಾಗಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. “ಡಿಕೆ ಶಿವಕುಮಾರ್ ಅವರು ಕಳೆದ ವರ್ಷ ಜನರಿಗೆ ಭರವಸೆಯ ಮಾತುಗಳನ್ನು ಹೇಳಿದ್ದರು. ಆದರೆ, ಈಗ ಮನೆ ಬಾಗಿಲಿಗೆ ಪರಿಹಾರದ ಬದಲು ಕೊಳಚೆ ನೀರು ಮತ್ತು ಕಸದ ರಾಶಿಯನ್ನು ತಂದಿಟ್ಟಿದ್ದಾರೆ,” ಎಂದು ವ್ಯಂಗ್ಯವಾಡಿದ್ದಾರೆ. ಹಿಂದಿನ ಸರ್ಕಾರದ ಲೋಪಗಳಿಂದ ಈ ಸಮಸ್ಯೆ ಎಂದು ಡಿಕೆಶಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಆರ್. ಅಶೋಕ್, “ಎರಡು ವರ್ಷಗಳ ಕಾಲ ಸರ್ಕಾರ ಏನು ಮಾಡಿತು? ಇದೇನಾ ಬ್ರಾಂಡ್ ಬೆಂಗಳೂರು?” ಎಂದು ಪ್ರಶ್ನಿಸಿದ್ದಾರೆ.
ತಕ್ಷಣ ಕ್ರಮಕ್ಕೆ ಒತ್ತಾಯ
ಸರ್ಕಾರ ತಕ್ಷಣ ತುರ್ತು ಕ್ರಮ ಕೈಗೊಂಡು ಸಂತ್ರಸ್ತರಿಗೆ ನೆರವಾಗಬೇಕು ಎಂದು ಆಗ್ರಹಿಸಿರುವ ಆರ್. ಅಶೋಕ್, ಬೆಂಗಳೂರಿನ ಜನರಿಗೆ ಈ ದುರಾಡಳಿತದಿಂದ ದಿನವೂ ತೊಂದರೆಯಾಗುತ್ತಿದೆ ಎಂದಿದ್ದಾರೆ. “ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ಕೊಚ್ಚಿಕೊಂಡು ಹೋಗಿದೆ. ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಿಂದಿನ ಸರ್ಕಾರವನ್ನು ದೂರುವ ಬದಲು, ಸಂತ್ರಸ್ತರಿಗೆ ಪರಿಹಾರ ಒದಗಿಸಲಿ,” ಎಂದು ಒತ್ತಾಯಿಸಿದ್ದಾರೆ.