ಗದಗ: ಮಹದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದರೆ, ಬಿಜೆಪಿ ಅವಧಿಯಲ್ಲಿ ಆರಂಭವಾದ ಕಾಮಗಾರಿಯನ್ನು ತಡೆದು, ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆ ಕಟ್ಟಿದ್ದು ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದಾರೆ.
ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆಯಲ್ಲಿ ಯಾವುದೇ ಪ್ರಗತಿ ಸಾಧಿಸಿದ್ದು ಬಿಜೆಪಿ ಸರ್ಕಾರ. “ಕಾಂಗ್ರೆಸ್ ಸರ್ಕಾರ ನ್ಯಾಯಮಂಡಳಿಯನ್ನು ರಚಿಸಿತು, ಆದರೆ ನಾಲ್ಕು ವರ್ಷ ಕಚೇರಿಯನ್ನೂ ಒದಗಿಸಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಕಚೇರಿ ಒದಗಿಸಿ, ನ್ಯಾಯಮಂಡಳಿಯ ಆದೇಶವನ್ನು ಪಡೆಯಲಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆದೇಶ ಹೊರಡಿಸಿತು. ಯೋಜನೆಗೆ ಡಿಪಿಆರ್ ತಯಾರಿಸಿ, ಪರಿಸರ ಅನುಮತಿಯನ್ನೂ ಬಿಜೆಪಿ ಸರ್ಕಾರವೇ ಪಡೆದುಕೊಂಡಿತು. ಆದರೆ, ಕಾಂಗ್ರೆಸ್ ಸರ್ಕಾರ ಬಿಜೆಪಿ ಅವಧಿಯಲ್ಲಿ ಆರಂಭವಾದ ಇಂಟರ್‌ಲಿಂಕಿಂಗ್ ಕಾಲುವೆ ಕಾಮಗಾರಿಯನ್ನು ತಡೆದು, ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆ ಕಟ್ಟಿತು,” ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಗೋವಾ ಸಿಎಂ ಹೇಳಿಕೆ ಖಂಡನೆ
ಗೋವಾ ಮುಖ್ಯಮಂತ್ರಿಯವರ ಹೇಳಿಕೆಯನ್ನು ಖಂಡಿಸಿರುವ ಬೊಮ್ಮಾಯಿ, “ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಒಂದು ರಾಜ್ಯದ ಹಿತಾಸಕ್ತಿಗಾಗಿ ಇಷ್ಟು ದೊಡ್ಡ ರಾಜಕೀಯ ಆಟ ಆಡುವುದು ಸರಿಯಲ್ಲ. ಗೋವಾ ಸಿಎಂ ನ್ಯಾಯಸಮ್ಮತವಾಗಿ ವರ್ತಿಸಬೇಕು,” ಎಂದರು. ಕಾಂಗ್ರೆಸ್ ನಾಯಕರಿಗೆ ಮಹದಾಯಿ ವಿಷಯದಲ್ಲಿ ಮಾತನಾಡಲು ಯಾವ ನೈತಿಕ ಹಕ್ಕಿಲ್ಲ ಎಂದು ಪ್ರಶ್ನಿಸಿದ ಅವರು, “ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದಿದ್ದರು. ಕಾಂಗ್ರೆಸ್‌ಗೆ ಈ ವಿಷಯದಲ್ಲಿ ಮಾತನಾಡಲು ಯಾವ ಆಧಾರವಿದೆ?” ಎಂದು ಕಿಡಿಕಾರಿದರು.
ಯೂರಿಯಾ ಕೊರತೆ: ಸರ್ಕಾರದ ವೈಫಲ್ಯ
ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯ ಬಗ್ಗೆ ಮಾತನಾಡಿದ ಬೊಮ್ಮಾಯಿ, “ಈ ವರ್ಷ ಮಳೆ ಮುಂಚಿತವಾಗಿ ಆಗಿದ್ದರಿಂದ ರಾಜ್ಯ ಸರ್ಕಾರ ಗೊಬ್ಬರದ ಬೇಡಿಕೆಯನ್ನು ಮುಂಚಿತವಾಗಿ ಈಡೇರಿಸಬೇಕಿತ್ತು. ಬಫರ್ ಸ್ಟಾಕ್ ಇಟ್ಟುಕೊಂಡು, ಸರಿಯಾಗಿ ನಿರ್ವಹಣೆ ಮಾಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಕೃಷಿ ಮತ್ತು ರಸಗೊಬ್ಬರ ಸಚಿವರ ಜೊತೆ ಮಾತನಾಡಿ, ಹೆಚ್ಚುವರಿ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುತ್ತೇನೆ. ಆದರೆ, ರಾಜ್ಯ ಸರ್ಕಾರ ಈಗಿರುವ ಗೊಬ್ಬರವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು,” ಎಂದು ಕೃಷಿ ಇಲಾಖೆ ಮತ್ತು ಮಂತ್ರಿಗಳಿಗೆ ಸಲಹೆ ನೀಡಿದರು.
ಸಿದ್ದರಾಮಯ್ಯ-ನಾಲ್ವಡಿ ಹೋಲಿಕೆಗೆ ತಿರುಗೇಟು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಸಿರುವ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, “ಯತೀಂದ್ರ ಅವರು ತಮ್ಮ ತಂದೆಯ ಸಾಧನೆಯನ್ನು ಒಡೆಯರ್‌ಗೆ ಹೋಲಿಕೆ ಮಾಡಿದ್ದಾರೆ. ಆದರೆ, ಸೂರ್ಯನನ್ನು ಸಣ್ಣ ಬೆಳಕಿಗೆ ಹೋಲಿಕೆ ಮಾಡಲು ಸಾಧ್ಯವೇ? ಸೂರ್ಯ ಸೂರ್ಯನೇ,” ಎಂದು ವ್ಯಂಗ್ಯವಾಡಿದರು.