ಬಿಜೆಪಿಯ ಮತಗಳ್ಳತನ ಜನರಿಗೆ ತಿಳಿಸಬೇಕು; ಹನಿಟ್ರ್ಯಾಪ್ ತನಿಖೆ ಬಗ್ಗೆ ಗೊತ್ತಿಲ್ಲ
ಬೆಂಗಳೂರು: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬರುವ ಐಟಿ ಕಂಪನಿಗಳನ್ನು ಮುಕ್ತವಾಗಿ ಸ್ವಾಗತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. “ತಂತ್ರಜ್ಞಾನ, ವಿದ್ಯುತ್ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ” ಎಂದು ಅವರು ಹೇಳಿದರು.
ಗುರುವಾರ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕ್ವಾಂಟಮ್ ಶೃಂಗಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, “ಮಹಾರಾಷ್ಟ್ರದ ಉಪಮುಖ್ಯಮಂತ್ರಿಯವರು ಪುಣೆಯಿಂದ ಬೆಂಗಳೂರಿಗೆ ಐಟಿ ಕಂಪನಿಗಳು ವಲಸೆಯಾಗುತ್ತಿವೆ ಎಂದು ಹೇಳಿದ್ದಾರೆ. ಅವರಿಗೆ ಧನ್ಯವಾದ. ನಾವು ದೇಶದ ರಾಜ್ಯಗಳೊಂದಿಗೆ ಸ್ಪರ್ಧಿಸದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ” ಎಂದರು.
“ಮಹಾರಾಷ್ಟ್ರದ ಪುಣೆಯ ಹಿಂಜವಾಡಿ ಪ್ರಮುಖ ಐಟಿ ಕೇಂದ್ರವಾಗಿದೆ. ಆದರೆ, ನಮ್ಮ ರಾಜ್ಯಕ್ಕೆ ಬರುವ ಐಟಿ ಕಂಪನಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಬಿಜೆಪಿಯ ಮತಗಳ್ಳತನ ಜನರಿಗೆ ತಿಳಿಯಬೇಕು
ಬಿಜೆಪಿಯ ಮತಗಳ್ಳತನದ ವಿರುದ್ಧ ನಗರದಲ್ಲಿ ಪ್ರತಿಭಟನೆ ಆಯೋಜಿಸಿರುವ ಬಗ್ಗೆ ಟೀಕೆಗೆ ಒಳಗಾಗಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮ ರಾಜಕೀಯ ನಿಲುವಿನ ಬಗ್ಗೆ ಬೇರೆಯವರಿಗೆ ಏಕೆ ತೊಂದರೆ? ಕರ್ನಾಟಕದ ಜನರಿಗೆ ಮಾತ್ರ ನಾವು ಉತ್ತರದಾಯಿಗಳು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಚಿಲುಮೆ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಿದ್ದಾರೆ. ತನಿಖೆಯ ಆಧಾರದಲ್ಲಿ ನಮ್ಮ ನಾಯಕರು ಈ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ರಾಜಕೀಯ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿಲ್ಲ, ಜನರನ್ನು ಎಚ್ಚರಗೊಳಿಸಲು ಬರುತ್ತಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕು, ಚುನಾವಣಾ ಆಯೋಗ ರಾಜಕೀಯ ಪಕ್ಷದ ಭಾಗವಾಗಬಾರದು” ಎಂದರು.
ರಾಹುಲ್ ಗಾಂಧಿಯವರ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, “ಬಿಜೆಪಿಯ ಮತಗಳ್ಳತನವನ್ನು ಜನರಿಗೆ ತಿಳಿಸುವುದೇ ನಮ್ಮ ಗುರಿ. ಪ್ರತಿಭಟನಾ ಸಭೆಯೋ ರ್ಯಾಲಿಯೋ ಎಂಬುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು. ಚುನಾವಣಾ ಆಯೋಗದ ದುರುಪಯೋಗದಿಂದ ಬಿಜೆಪಿ ಚುನಾವಣಾ ಅಕ್ರಮ ಎಸಗಿರುವುದನ್ನು ಬೆಳಕಿಗೆ ತರಬೇಕು. ಈ ಬಗ್ಗೆ ಪಕ್ಷದಿಂದ ಸಂಶೋಧನೆ ನಡೆದಿದೆ. ಆದರೆ, ನ್ಯಾಯಾಲಯದ ನಿರ್ದೇಶನ ಮತ್ತು ಸರ್ಕಾರದ ಮಾರ್ಗಸೂಚಿಗಳಿಂದಾಗಿ ಪ್ರತಿಭಟನೆಯ ಸ್ವರೂಪವನ್ನು ಚರ್ಚಿಸಲಾಗುವುದು” ಎಂದರು.
ಹನಿಟ್ರ್ಯಾಪ್ ತನಿಖೆ ಬಗ್ಗೆ ಗೊತ್ತಿಲ್ಲ
ರಾಜಣ್ಣ ಅವರ ಹನಿಟ್ರ್ಯಾಪ್ ವಿಚಾರದಲ್ಲಿ ಸಿಐಡಿ ವರದಿಯಲ್ಲಿ ಸಾಕ್ಷ್ಯವಿಲ್ಲ ಎಂಬ ಕುರಿತು ಕೇಳಿದಾಗ, “ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ಯಾರು ದೂರು ಕೊಟ್ಟಿದ್ದು, ತನಿಖೆ ನಡೆದಿದೆಯೇ ಎಂಬುದು ತಿಳಿದಿಲ್ಲ. ಇದನ್ನು ಮಾಧ್ಯಮಗಳಿಂದಲೇ ಕೇಳುತ್ತಿದ್ದೇನೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಕೆಎಂಎಫ್ ಅಧ್ಯಕ್ಷಗಾದಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, “ಇದು ಮಾಧ್ಯಮಗಳ ಸೃಷ್ಟಿ. ಸಂಘದ ಪದಾಧಿಕಾರಿಗಳು ಈ ವಿಷಯವನ್ನು ನೋಡಿಕೊಳ್ಳುತ್ತಾರೆ” ಎಂದರು.
ಆಭರಣ ಮಳಿಗೆ ಉದ್ಘಾಟನೆ
ಆಭರಣ ಮಳಿಗೆ ಉದ್ಘಾಟನೆಯ ನಂತರ ಮಾತನಾಡಿದ ಶಿವಕುಮಾರ್, “ಈ ಕುಟುಂಬ ನನಗೆ ವರ್ಷಗಳಿಂದ ಆತ್ಮೀಯ. ಅವರ 20ನೇ ಮಳಿಗೆಯನ್ನು ಉದ್ಘಾಟಿಸಿದ್ದೇನೆ. ಇದು 200 ಮಳಿಗೆಗಳಾಗಿ ಬೆಳೆಯಲಿ ಎಂದು ಆಶಿಸುತ್ತೇನೆ. ಉಡುಪಿಯವರಾದ ಈ ಕುಟುಂಬದವರು ಬೆಂಗಳೂರಿನಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ. ಸ್ಥಳೀಯರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ” ಎಂದರು.