ಬೆಂಗಳೂರು: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, 30,000 ಗ್ರಾಮೀಣ ಮಹಿಳೆಯರನ್ನು ಸ್ವ-ಉದ್ಯೋಗಕ್ಕೆ ಸಜ್ಜುಗೊಳಿಸುವ “ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ”ಯನ್ನು ಆರಂಭಿಸಲು ಸಜ್ಜಾಗಿದೆ. ಈ ಕುರಿತು ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆಯು ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ನೀಡಲು ಉದ್ದೇಶಿತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 29 ಜಿಲ್ಲೆಗಳ ಪ್ರತಿಯೊಂದರಿಂದ ಮೂರು ಗ್ರಾಮ ಪಂಚಾಯತಿಗಳಂತೆ ಆಯ್ಕೆ ಮಾಡಿ 87 ಕೇಂದ್ರಗಳನ್ನು, ಜೊತೆಗೆ ಬೆಳಗಾವಿ ಜಿಲ್ಲೆಯಿಂದ 7 ಮತ್ತು ತುಮಕೂರು ಜಿಲ್ಲೆಯಿಂದ 6 ಕೇಂದ್ರಗಳನ್ನು ಸೇರಿಸಿ ಒಟ್ಟು 100 ಕೌಶಲ್ಯ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದೊಂದಿಗೆ ತರಬೇತಿಯನ್ನು ನೀಡಲಾಗುವುದು.
ಸಚಿವ ಖರ್ಗೆ ಅವರು ತಿಳಿಸಿರುವಂತೆ, ಪ್ರತಿ ತರಬೇತಿ ಕೇಂದ್ರದಿಂದ ಕನಿಷ್ಠ 300 ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಿದ್ದು, ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮ, ರುಡ್ಸೆಟಿ ಹಾಗೂ ಆರ್ಸೆಟಿ ಸೇರಿದಂತೆ ವಿವಿಧ ಸರ್ಕಾರೇತರ ಬೆಂಬಲ ಸಂಸ್ಥೆಗಳ (TSA) ಸಹಕಾರದಿಂದ ತರಬೇತಿ, ಬ್ಯಾಂಕುಗಳೊಂದಿಗೆ ಸಂಪರ್ಕ, ಅನುಸರಣೆ ಮತ್ತು ಬೆಂಬಲದ ಮೂಲಕ ಸ್ವ-ಉದ್ಯೋಗ ಪ್ರಾರಂಭಿಸಲು ನೆರವಿನ ವ್ಯವಸ್ಥೆ ಕಲ್ಪಿಸಲಾಗುವುದು.
ಕೃಷಿಯಿಂದ ಲಾಭ ಪಡೆಯದೇ ಪರ್ಯಾಯ ಆದಾಯದ ಮಾರ್ಗವನ್ನು ಹುಡುಕುತ್ತಿರುವ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಮತ್ತು ಕೌಶಲ್ಯ ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಿಂದ ಮಹಿಳೆಯರಲ್ಲಿ ಅಡಗಿರುವ ಸಾಮರ್ಥ್ಯ ಬೆಳೆಯುವ ಜೊತೆಗೆ, ತಮ್ಮದೇ ಆದ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬೆಳೆಯುವ ಅವಕಾಶ ಒದಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.