ಬೆಂಗಳೂರು: ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಒಂದು ಗಂಭೀರ ಸಂಘಟಿತ ಅಪರಾಧವಾಗಿದ್ದು, ಲಕ್ಷಾಂತರ ಜನರ ಘನತೆ, ಸ್ವಾತಂತ್ರ್ಯ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಈ ಆಧುನಿಕ ಗುಲಾಮಗಿರಿಯ ರೂಪವನ್ನು ನಿರ್ಮೂಲನೆ ಮಾಡಲು ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುವ ಗುರಿಯೊಂದಿಗೆ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದೊಂದಿಗೆ ಇಂದು “ಮಹಿಳೆಯರ ಮತ್ತು ಮಕ್ಕಳ ಅನೈತಿಕ ಕಳ್ಳಸಾಗಾಣಿಕೆ” ಕುರಿತು ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಿತು. ಈ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಶ್ರೀ ಪ್ರಿಯಾಂಕ್ ಕಾನೂಂಗೊ ಅವರು ವಹಿಸಿದ್ದರು.
ಮಾನವ ಕಳ್ಳಸಾಗಾಣಿಕೆಯ ಈ ಭಯಾನಕ ಅಪರಾಧವು ಲಾಭಕ್ಕಾಗಿ ದುರ್ಬಲರನ್ನು ಶೋಷಣೆ ಮಾಡುವ ಸಂಘಟಿತ ಜಾಲವಾಗಿದೆ. ಈ ಸಭೆಯ ಉದ್ದೇಶವು ಮಾನವ ಕಳ್ಳಸಾಗಾಣಿಕೆಯನ್ನು ತಡೆಗಟ್ಟುವಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ಬಲಪಡಿಸುವುದು, ಬಲಿಪಶುಗಳಿಗೆ ಮತ್ತು ಬದುಕುಳಿದವರಿಗೆ ಬೆಂಬಲ ಮತ್ತು ಪರಿಹಾರ ನೀಡುವುದು ಆಗಿತ್ತು. ಸಂಬಂಧಪಟ್ಟ ಇಲಾಖೆಗಳು ಮತ್ತು ಇತರ ಪಾಲುದಾರರು ಅಳವಡಿಸಿಕೊಂಡಿರುವ ಕ್ರಮಗಳು ಮತ್ತು ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್, ಆಯೋಗದ ಸದಸ್ಯರಾದ ಶ್ರೀ ಎಸ್. ಕೆ. ವಂಟಿಗೋಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಕೆ. ನಾಗಣ್ಣ ಗೌಡ ಮತ್ತು ಸದಸ್ಯರು, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಪಿ. ಹರಿಶೇಖರನ್, ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕದ ರಾಜ್ಯ ನೋಡಲ್ ಅಧಿಕಾರಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ದೇವಜ್ಯೋತಿ ರೇ ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಭೆಯು ಮಾನವ ಕಳ್ಳಸಾಗಾಣಿಕೆಯ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಈ ಗಂಭೀರ ಸಮಸ್ಯೆಯನ್ನು ಎದುರಿಸಲು ಎಲ್ಲಾ ಪಾಲುದಾರರ ಸಹಕಾರ ಮತ್ತು ಬದ್ಧತೆಯನ್ನು ಒತ್ತಿಹೇಳಿತು.