ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಘೋಷಿಸಿದ ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆಗೆ ಇದೀಗ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ ೨೮ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರೀ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಈ ಬ್ಯಾಂಕ್‌ಗೆ ಚಾಲನೆ ದೊರೆಯಲಿದೆ. ಅದೇ ದಿನ ಐಸಿಡಿಎಸ್ ಸುವರ್ಣ ಮಹೋತ್ಸವ ಮತ್ತು ಮಹಿಳಾ ಸುರಕ್ಷತಾ ತುಕಡಿ ‘ಅಕ್ಕಪಡೆ’ಯ ಲೋಕಾರ್ಪಣೆ ಕೂಡ ನಡೆಯಲಿದೆ.
ತುಮಕೂರು ನಗರದ ಬಾಲ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, “ಗೃಹಲಕ್ಷ್ಮೀ ಯೋಜನೆ ಬಂದ ಮೇಲೆ ನಮ್ಮ ಇಲಾಖೆ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಗೃಹಲಕ್ಷ್ಮೀ ಬ್ಯಾಂಕ್ ಮಹಿಳೆಯರ ಸ್ವಾವಲಂಬನೆಗೆ ಹೊಸ ಕ್ರಾಂತಿಯನ್ನೇ ತಂದಿಡಲಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ತುಮಕೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಬೇಕು” ಎಂದು ಆಗ್ರಹಿಸಿದರು.
ಗೃಹಲಕ್ಷ್ಮೀ ಬ್ಯಾಂಕ್ ವೈಶಿಷ್ಟ್ಯಗಳು:
- ಸಂಪೂರ್ಣ ಕ್ಯಾಶ್‌ಲೆಸ್ ವ್ಯವಹಾರ
- ಕೇವಲ ವೈಯಕ್ತಿಕ ಸಾಲ ಮಾತ್ರ (ಗುಂಪು/ಸಂಘಗಳಿಗೆ ಅಲ್ಲ)
- ₹೧,೦೦೦ ಶೇರ್ ಹಣದೊಂದಿಗೆ ಸದಸ್ಯತ್ವ
- ಪ್ರತಿ ತಿಂಗಳು ₹೨೦೦ ಉಳಿತಾಯ ಕಡ್ಡಾಯ
- ೬ ತಿಂಗಳ ನಂತರ ₹೩೦,೦೦೦ ರಿಂದ ₹೩ ಲಕ್ಷದವರೆಗೆ ಸಾಲ
- ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರದಲ್ಲಿ ಸಾಲ ಸಿಗಲಿದೆ
- ಖಾಸಗಿ ಹಣಕಾಸು ಸಂಸ್ಥೆಗಳ ದೋಪಿಡಿಯಿಂದ ಮಹಿಳೆಯರ ರಕ್ಷಣೆ ಉದ್ದೇಶ
“ಇದು ವಿಶ್ವದಲ್ಲೇ ಮಾದರಿಯಾಗಲಿದೆ. ಯಾವ ಸರ್ಕಾರ ಬಂದರೂ ಈ ಬ್ಯಾಂಕ್ ಮುಚ್ಚಲು ಸಾಧ್ಯವಿಲ್ಲ, ಇದು ಮಹಿಳೆಯರ ಶಕ್ತಿಯ ಸಂಕೇತವಾಗಿ ಉಳಿಯಲಿದೆ” ಎಂದು ಸಚಿವೆ ಘೋಷಿಸಿದರು.
ಅಕ್ಕಪಡೆ: ಮಹಿಳಾ ಸುರಕ್ಷತೆಗೆ ಹೊಸ ರಕ್ಷಕ ದಳ
೩೧ ಜಿಲ್ಲಾ ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ‘ಅಕ್ಕಪಡೆ’ಯಲ್ಲಿ ಪ್ರತಿ ಗಸ್ತು ವಾಹನದಲ್ಲಿ ೫-೧೦ ಮಹಿಳಾ ಸ್ವಯಂಸೇವಕಿಯರೊಂದಿಗೆ ಇಬ್ಬರು ಮಹಿಳಾ ಪೊಲೀಸರು ಇರಲಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಈ ತುಕಡಿ ದಿನವಿಡೀ ಕಾರ್ಯನಿರತವಾಗಿರಲಿದೆ.
ಇಲಾಖೆಯ ಸಾಧನೆಗಳು:
- ಅಂಗನವಾಡಿಗಳಲ್ಲಿ LKG-UKG ಆರಂಭ
- ೧೫,೦೦೦ ಕಾರ್ಯಕರ್ತೆಯರಿಗೆ ಪದವಿ ತರಬೇತಿ
- ಕೇಂದ್ರದ NDA ಸರ್ಕಾರದಲ್ಲಿಯೂ ಅತಿ ಹೆಚ್ಚು ಅನುದಾನ ಪಡೆದ ರಾಜ್ಯ
- ಎಫ್‌ಆರ್‌ಎಸ್‌ನಲ್ಲಿ ಶೇ. ೯೯% ಯಶಸ್ಸು – ತುಮಕೂರು ಜಿಲ್ಲೆಗೆ ವಿಶೇಷ ಕೀರ್ತಿ
- ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಚುನಾವಣಾ ಕೆಲಸದಿಂದ ವಿಮುಕ್ತಿ
ಸಭೆಯಲ್ಲಿ ಸಚಿವೆಯವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿ, “ನಾಲ್ಕು ಬಾರಿ ಬಿ-ಫಾರ್ಮ್ ನೀಡಿ, ಇಂದು ಸಚಿವೆಯಾಗಿ ಮಾಡಿದ್ದಾರೆ. ಅವರ ಋಣ ಎಂದಿಗೂ ಮರೆಯೇನು” ಎಂದು ಭಾವುಕರಾದರು.
ಸಭೆಯಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಗ್ಯಾರಂಟಿ ಯೋಜನಾ ಅಧ್ಯಕ್ಷರು, ಇಲಾಖೆಯ ಉಪನಿರ್ದೇಶಕ ಸಿದ್ದರಾಮಣ್ಣ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.
ನವೆಂಬರ್ ೨೮ರ ಬೆಂಗಳೂರು ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯಿಂದ ಸಾವಿರಾರು ಮಹಿಳೆಯರ ಆಗಮನಕ್ಕೆ ಸಭೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಯಿತು.












