ಬೆಂಗಳೂರು: ಮಾಗಡಿ ಮತ್ತು ಕುಣಿಗಲ್ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 70.00 ಕಿ.ಮೀ.ನಿಂದ ಗುರುತ್ವಾಕರ್ಷಣೆ ಪೈಪ್‌ಲೈನ್ ಮೂಲಕ ಶ್ರೀರಂಗ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಖಾತರಿಪಡಿಸುವ ಸಂಬಂಧ ಚರ್ಚಿಸಲು ಜಲ ಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ವಿಧಾನಸೌಧದಲ್ಲಿ ಸಭೆ ಕರೆದಿದ್ದರು.

ಈ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಡಾ. ಸಿ.ಎನ್. ಮಂಜುನಾಥ್, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ. ಜಿ. ಪರಮೇಶ್ವರ, ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಬಿ. ಸುರೇಶ್ ಗೌಡ, ಡಾ. ರಂಗನಾಥ್, ಬಾಲಕೃಷ್ಣ, ಮುಖಂಡರಾದ ಎಚ್.ಎಂ. ರೇವಣ್ಣ, ಎಂ.ಟಿ. ಕೃಷ್ಣಪ್ಪ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಡಿಸಿಎಂ ತಾಂತ್ರಿಕ ಸಲಹೆಗಾರ ಜೈಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಯೋಜನೆಯು ಮಾಗಡಿ ಮತ್ತು ಕುಣಿಗಲ್ ತಾಲೂಕುಗಳ ಜನತೆಗೆ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವ ಗುರಿಯನ್ನು ಹೊಂದಿದ್ದು, ಶ್ರೀರಂಗ ಕೆರೆಗೆ ನೀರು ತುಂಬಿಸುವ ಮೂಲಕ ಪ್ರದೇಶದ ನೀರಿನ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಸಭೆಯಲ್ಲಿ ಯೋಜನೆಯ ತಾಂತ್ರಿಕ ವಿವರಗಳು, ಅನುಷ್ಠಾನದ ಕಾಲಮಿತಿ ಮತ್ತು ಅಗತ್ಯ ಸಂಪನ್ಮೂಲಗಳ ಕುರಿತು ವಿವರವಾದ ಚರ್ಚೆ ನಡೆಯಿತು.