ರಾಮನಗರ ಜಿಲ್ಲೆ ಬಿಡದಿಯಲ್ಲಿ ನಡೆದಿರುವ ಗುಂಡಿನ ದಾಳಿಯಿಂದ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಗಂಭೀರವಾಗಿ ಗಾಯಗೊಂಡಿದ್ದಾರೆ. ತಡರಾತ್ರಿ ಸುಮಾರು 12.50ರ ಸುಮಾರಿಗೆ ಈ ಅಘಾತಕ ಘಟನೆ ನಡೆದಿದೆ.
ಘಟನೆಯ ವಿವರ:
ಬಿಡದಿಯಲ್ಲಿರುವ ಮುತ್ತಪ್ಪ ರೈ ನಿವಾಸದ ಹೊರಗೆ, ರಿಕ್ಕಿ ರೈ ಕಾರಿನಲ್ಲಿ ಹೊರಡುವ ವೇಳೆ ದುಷ್ಕರ್ಮಿಗಳು ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ಕಾರು ಚಾಲಕ ರಾಜು ಡ್ರೈವಿಂಗ್ ಸೀಟ್‌ನಲ್ಲಿ ಇದ್ದಾಗ, ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಭುಜದ ಭಾಗಕ್ಕೆ ಗುಂಡು ತಾಗಿ ಗಾಯವಾಗಿದೆ. ಚಾಲಕ ರಾಜು ತಕ್ಷಣ ಮುನ್ನುಗ್ಗಿ ತಲೆ ತಗ್ಗಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಪೂರ್ವಯೋಜಿತ ಹತ್ಯೆ ಯತ್ನವೆ?
ಪೊಲೀಸರು ಈ ದಾಳಿಯ ಹಿಂದೆ ಪೂರ್ವಯೋಜಿತ ಹತ್ಯೆ ಯತ್ನವಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ರಿಕ್ಕಿ ರೈ ಅವರ ಚಲನ ವಲನಗಳ ಮಾಹಿತಿ ಸಂಗ್ರಹಿಸಿ, ದೂರದಿಂದಲೆ ಹೊಡೆದು ಹಾಕುವ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಇತ್ತೀಚೆಗಷ್ಟೆ ರಿಕ್ಕಿ ರೈ ರಷ್ಯಾದಿಂದ ಮರಳಿ ಬಂದಿದ್ದು, ರಿಯಲ್ ಎಸ್ಟೇಟ್ ಮತ್ತು ಹೊಟೆಲ್ ಉದ್ಯಮದಲ್ಲಿ ಸಕ್ರಿಯರಾಗಿದ್ದರು.
ಶಾಟ್ ಗನ್ ಬಳಕೆಯ ಶಂಕೆ – ಮಿಸ್ ಫೈರ್?
ಈ ಪ್ರಕರಣದ ವಿಶೇಷತೆ ಎಂದರೆ, ದಾಳಿಯಲ್ಲಿ ಶಾಟ್ ಗನ್ ಬಳಕೆಯಾಗಿದೆ ಎಂಬುದು. ಶಾಟ್ ಗನ್ ಸಾಮಾನ್ಯವಾಗಿ ಪ್ರೊಫೆಷನಲ್ ಶೂಟರ್ ಗಳು ಬಳಸದ ಪಿಸ್ತೂಳಿಯಾಗಿದ್ದು, ಕಡಿಮೆ ದೂರಕ್ಕೆ ಪರಿಣಾಮ ಬೀರುತ್ತದೆ. ಇದರಿಂದಲೇ ರಿಕ್ಕಿ ರೈ ಜೀವದ ಅಪಾಯದಿಂದ ಪಾರಾಗಿರುವ ಸಾಧ್ಯತೆ. ಈ ಹಿನ್ನೆಲೆಯಲ್ಲಿ, ಸೆಕ್ಯುರಿಟಿ ಅಥವಾ ಅಂಗ ರಕ್ಷಕರಿಂದ ಮಿಸ್ ಫೈರ್ ಆಗಿರಬಹುದೆಂಬತ್ತೂ ಪೊಲೀಸರ ಶಂಕೆ ಎದುರಾಗುತ್ತಿದೆ.
ಎಫ್‌ಐಆರ್ ದಾಖಲೆ – ಆರೋಪಿಗಳ ಮೇಲೆ ಪ್ರಕರಣ:
ಘಟನೆಯ ಸಂಬಂಧ ಚಾಲಕ ಬಸವರಾಜ್ ನೀಡಿದ ದೂರಿನಂತೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ರಾಕೇಶ್ ಮಲ್ಲಿ, ಅವರ ಎರಡನೇ ಪತ್ನಿ ಅನುರಾದ್, ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಹಾಗೂ ವೈದ್ಯನಾಥ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಜಮೀನು ವಿವಾದವೊಂದೂ ಹಿನ್ನೆಲೆಯಾ?
ಮಂಗಳೂರಿನ ಗುರುವಾಯುರು ಸಮೀಪದ 12 ಎಕರೆ ಜಮೀನಿನ ವಿವಾದವು ಈ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಜಮೀನಿನ ವಿಚಾರದಲ್ಲಿ ಮುತ್ತಪ್ಪ ರೈ ಹಾಗೂ ಆರೋಪಿಗಳ ನಡುವೆ ವಾದವಿವಾದ ಇತ್ತು. ಮುತ್ತಪ್ಪ ರೈ ಸಾವಿನ ಬಳಿಕವೂ ಈ ವಿವಾದ ಮುಂದುವರಿದಿತ್ತು.
ಪೊಲೀಸರಿಂದ ಚುರುಕು ತನಿಖೆ:
ಬಿಡದಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ, ಎಫ್‌ಎಸ್‌ಎಲ್, ಶ್ವಾನ ದಳ ಹಾಗೂ ಸೀನ್ ಆಫ್ ಕ್ರೈಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ರೈ ಅವರಿಂದ ಈಗಾಗಲೇ ಪ್ರಾಥಮಿಕ ಹೇಳಿಕೆ ದಾಖಲಾಗಿದೆ.