ಬೆಂಗಳೂರು: ಮಾಜಿ ಡಿಜಿಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣದ ತನಿಖೆಯು ಬಹುತೇಕ ಕೊನೆಯ ಹಂತವನ್ನು ತಲುಪಿದ್ದು, ಕೊಲೆಗೆ ಕಾರಣವಾದ ಪ್ರಮುಖ ಆಯಾಮಗಳನ್ನು ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಪತ್ತೆಹಚ್ಚಿದ್ದಾರೆ. ಕೌಟುಂಬಿಕ ಕಲಹ, ಆಸ್ತಿ ವಿವಾದ ಮತ್ತು ವೈಯಕ್ತಿಕ ಮನಸ್ತಾಪಗಳು ಕೊಲೆಗೆ ಕಾರಣವಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಈ ಕೊಲೆಯ ಪ್ರಮುಖ ಆರೋಪಿಯಾಗಿದ್ದಾರೆ.
ಸಿಸಿಬಿ ತನಿಖೆಯಿಂದ ಬಹಿರಂಗವಾದ ಕೊಲೆಗೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ:
- ಕೌಟುಂಬಿಕ ಕಲಹ ಮತ್ತು ವೈಯಕ್ತಿಕ ಆರೋಪಗಳು: ಪಲ್ಲವಿ, ತಮ್ಮ ಪತಿಯಾದ ಓಂ ಪ್ರಕಾಶ್ ತಮ್ಮ ಕುಟುಂಬದ ಬಗ್ಗೆ ಗಮನಹರಿಸದೆ, ತಮ್ಮ ಸಹೋದರಿಯ ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು ಎಂದು ಆರೋಪಿಸಿದ್ದರು. ಇದರಿಂದ ದಾಂಪತ್ಯದಲ್ಲಿ ಭುಗಿಲೆದ್ದ ಮನಸ್ತಾಪವು ಕೊಲೆಗೆ ಕಾರಣವಾಯಿತು.
- ಮಗಳ ಮದುವೆ ವಿಳಂಬ: ತಮ್ಮ ಮಗಳಾದ ಕೃತಿಯ ಮದುವೆಯನ್ನು ಓಂ ಪ್ರಕಾಶ್ ವಿಳಂಬ ಮಾಡಿದ್ದರಿಂದ ಪಲ್ಲವಿ ಕೋಪಗೊಂಡಿದ್ದರು.
- ಆರ್ಥಿಕ ನಿಯಂತ್ರಣ: ಐಶಾರಾಮಿ ಮನೆಯಲ್ಲಿದ್ದರೂ, ಓಂ ಪ್ರಕಾಶ್ ತಮ್ಮ ಪತ್ನಿ ಮತ್ತು ಮಗಳಿಗೆ ಖರ್ಚಿಗೆ ಹಣ ನೀಡುತ್ತಿರಲಿಲ್ಲ. ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಅವರೇ ನಿರ್ವಹಿಸುತ್ತಿದ್ದರು, ಇದು ಪಲ್ಲವಿಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
- ಕುಟುಂಬದ ಆದ್ಯತೆಯ ವಿವಾದ: ಓಂ ಪ್ರಕಾಶ್ ತಮ್ಮ ಸ್ವಂತ ಕುಟುಂಬಕ್ಕಿಂತ ತಮ್ಮ ಸಹೋದರಿಯ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಕುಟುಂಬದ ಸಮಸ್ಯೆಗಳ ಸಂದರ್ಭದಲ್ಲಿ ಅವರು ನೇರವಾಗಿ ಸಹೋದರಿಯ ಮನೆಗೆ ತೆರಳುತ್ತಿದ್ದರು, ಇದು ಪಲ್ಲವಿಯ ಕೋಪಕ್ಕೆ ಕಾರಣವಾಯಿತು.
- ಮಾನಸಿಕ ಒತ್ತಡ ಮತ್ತು ಭಯ: ಈ ಎಲ್ಲಾ ವಿಷಯಗಳಿಂದ ಮಾನಸಿಕವಾಗಿ ಕೊರಗಿದ್ದ ಪಲ್ಲವಿ, ಓಂ ಪ್ರಕಾಶ್ ತನ್ನನ್ನು ಕೊಲೆ ಮಾಡಬಹುದು ಎಂದು ಭಯಪಟ್ಟಿದ್ದರು. ಈ ಭಯದಿಂದಾಗಿ, ತಾನು ಕೊಲೆಯಾಗುವ ಬದಲು ತಾನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು.
ತನಿಖೆಯ ವಿವರಗಳು:
ಸಿಸಿಬಿ ಪೊಲೀಸರು ಸಿಡಿಆರ್ (ಕಾಲ್ ಡಿಟೇಲ್ಸ್ ರಿಕಾರ್ಡ್) ಮತ್ತು ಟವರ್ ಲೊಕೇಷನ್ ಆಧಾರದ ಮೇಲೆ ಸಂಪೂರ್ಣ ತನಿಖೆ ನಡೆಸಿದ್ದಾರೆ. ಕೊಲೆ ಸಂದರ್ಭದಲ್ಲಿ ಮಗಳು ಕೃತಿ ಮನೆಯಲ್ಲಿದ್ದರೂ, ಕ್ರೈಂ ಸೀನ್‌ನಲ್ಲಿ ಅವಳಿಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಟವರ್ ಲೊಕೇಷನ್ ಮನೆಯಲ್ಲೇ ತೋರಿಸುತ್ತಿದ್ದರಿಂದ, ಕೃತಿಯನ್ನು ಆರೋಪಿಯಾಗಿ ಗುರುತಿಸಲಾಗಿಲ್ಲ.