ಕರ್ನಾಟಕವನ್ನು ಮತ್ತೊಂದು ಪಂಜಾಬ್ ಆಗಲು ಬಿಡುವುದಿಲ್ಲ – ಗೃಹ ಸಚಿವ ಡಾ. ಜಿ. ಪರಮೇಶ್ವರ್
ಬೆಂಗಳೂರು: ರಾಜ್ಯವನ್ನು ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಪಂಜಾಬ್‌ನಂತಹ ಸ್ಥಿತಿಗೆ ತಲುಪಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒತ್ತಿ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ದಿಶಾಭೋದ್ ಫೌಂಡೇಶನ್ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ನಶಾಮುಕ್ತ ಭಾರತ – ನಶಾಮುಕ್ತ ಕರ್ನಾಟಕ – ನಶಾ ಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಕೂಡ ಈ ದಿಶೆಯಲ್ಲಿ ಸಹಕರಿಸಬೇಕು ಎಂದು ಕರೆ ನೀಡಿದರು.
“ನಶಾಮುಕ್ತ ರಾಜ್ಯ ನಿರ್ಮಾಣಕ್ಕೆ ಮೊದಲು ಕಾಲೇಜುಗಳು ನಶಾಮುಕ್ತವಾಗಬೇಕು. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ನಶಾಮುಕ್ತ ಕ್ಯಾಂಪಸ್ ಅಭಿಯಾನ ಅತ್ಯಂತ ಮಹತ್ವದ್ದು. ಇದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ,” ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ನೂರಾರು ಕೋಟಿ ಮೌಲ್ಯದ ಮಾದಕ ವಸ್ತುಗಳು ಜಪ್ತಿಯಾಗುತ್ತಿರುವುದನ್ನು ಉಲ್ಲೇಖಿಸಿ, ಆದರೂ ಹೊಸದಾಗಿ ಪ್ರವೇಶಿಸುತ್ತಿರುವುದು ಆತಂಕಕಾರಿ ಎಂದರು. ವಿದೇಶಿ ವಿದ್ಯಾರ್ಥಿಗಳ ಸೋಗಿನಲ್ಲಿ ಮಾದಕ ವಸ್ತು ಮಾರಾಟ ನಡೆಸುವವರ ಮೇಲೆ ಸರ್ಕಾರ ಕಣ್ಣಿಟ್ಟಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಸುಮಾರು 1500 ಆರೋಗ್ಯ ವಿಜ್ಞಾನಗಳ ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿಗಳನ್ನು ರಚಿಸುವಂತೆ ಖಡಕ್ ಸೂಚನೆ ನೀಡಬೇಕು. ಇದನ್ನು ಪಾಲಿಸದ ಕಾಲೇಜುಗಳ ಪರವಾನಗಿಗಳನ್ನು ರದ್ದುಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ಸರ್ಕಾರಿ ಬಸ್ಸುಗಳ ಮೇಲೆ ವ್ಯಸನ ವಿರೋಧಿ ಹಾಗೂ ಅಂಗಾಂಗ ದಾನದ ಜಾಗೃತಿ ಸಂದೇಶಗಳನ್ನು ಹಾಕುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಶೇಖರಣೆ ಮತ್ತು ಕಸಿ ಕೇಂದ್ರಗಳನ್ನು ಹೆಚ್ಚಿಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದರು. ಕರ್ನಾಟಕ ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.

ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ಮಾತನಾಡಿ, ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಅಂಗಾಂಗ ದಾನ ಸಂಗ್ರಹಣಾ ಮತ್ತು ಕಸಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಕೇವಲ 4-5 ತಿಂಗಳಲ್ಲಿ ವಿಶ್ವವಿದ್ಯಾಲಯದ 7 ಸಾವಿರಕ್ಕೂ ಅಧಿಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಂಗಾಂಗ ದಾನ ಪ್ರತಿಜ್ಞೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರತಿ ಮನೆಯೂ ಧೂಮಪಾನ ಮತ್ತು ಮದ್ಯಪಾನ ಮುಕ್ತವಾಗಬೇಕು ಎಂದು ಹೇಳಿ, ಮನೆಯಿಂದಲೇ ವ್ಯಸನ ತಡೆಗಟ್ಟುವ ಕೆಲಸ ಆರಂಭವಾಗಬೇಕು ಎಂದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಭಿಯಾನ ಅನುಕರಣೀಯವಾಗಿದ್ದು, ಇತರ ವಿಶ್ವವಿದ್ಯಾಲಯಗಳೂ ಇದನ್ನು ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎನ್‌ಸಿಬಿ ವಲಯ ನಿರ್ದೇಶಕ ಸಚಿನ್ ಘೋರ್ಪಡೆ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಾದಕ ವಸ್ತು ಪ್ರಕರಣಗಳು ಶೇ.63ರಷ್ಟು ಹೆಚ್ಚಾಗಿವೆ ಎಂದು ವರದಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಒತ್ತಿಹೇಳಿತು.












