ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ರಾಜಶೇಖರ ಎಸ್. ಅವರು ಆದೇಶ ಹೊರಡಿಸಿದ್ದಾರೆ
ಬೆಂಗಳೂರು: ಸಾರ್ವಜನಿಕರಿಂದ ಸಲ್ಲಿಸಲಾದ ಆರ್‌ಟಿಐ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ನೀಡದ ನಿರ್ಲಕ್ಷ್ಯಕ್ಕಾಗಿ ಮಾಲೂರು ತಾಲೂಕು ತಹಸೀಲ್ದಾರ್ ರೂಪ ಅವರಿಗೆ ಕರ್ನಾಟಕ ಮಾಹಿತಿ ಆಯೋಗವು ಒಟ್ಟು 60 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ಆಯೋಗದ ಪೀಠ ಸಂಖ್ಯೆ-5ರಲ್ಲಿ ನಡೆದ ವಿಚಾರಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ಪರಿಗಣಿಸಿ ಈ ದಂಡ ವಿಧಿಸಲಾಗಿದೆ. ಎರಡು ಪ್ರಕರಣಗಳಲ್ಲಿ ತಲಾ 25 ಸಾವಿರ ರೂಪಾಯಿ ಮತ್ತು ಒಂದು ಪ್ರಕರಣದಲ್ಲಿ 10 ಸಾವಿರ ರೂಪಾಯಿ ದಂಡ ಹಾಕಿ ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ ಎಸ್. ಅವರು ಆದೇಶ ಹೊರಡಿಸಿದ್ದಾರೆ.
ತಹಸೀಲ್ದಾರ್ ರೂಪ ಅವರು ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿಸಿದ್ದಲ್ಲದೆ, ಆಯೋಗದ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದ ಕಾರಣ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ದಂಡದ ಮೊತ್ತವನ್ನು ಅವರ ವೇತನದಿಂದ ಒಂದೇ ಬಾರಿಗೆ ಕಡಿತಗೊಳಿಸಿ ಆಯೋಗದ ಖಾತೆಗೆ ಜಮಾ ಮಾಡುವಂತೆ ಕೋಲಾರ ಸಹಾಯಕ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಪ್ರಕರಣಗಳ ವಿವರ:
- ಮೊದಲ ಪ್ರಕರಣ: ಮಾಲೂರು ತಾಲೂಕಿನ ಭೈರತ್ನಹಳ್ಳಿಯ ವಿಜಯಕುಮಾರ್ ಬಿ.ಎಂ. ಅವರು ಬ್ಯಾಟರಾಯನಹಳ್ಳಿ ಗ್ರಾಮದ ಸರ್ವೇ ನಂ. 5ಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರಿದ್ದರು. ತಹಸೀಲ್ದಾರ್ ಯಾವುದೇ ಮಾಹಿತಿ ನೀಡದೆ ಆಯೋಗದ ಆದೇಶವನ್ನೂ ನಿರ್ಲಕ್ಷಿಸಿದ್ದರಿಂದ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
- ಎರಡನೇ ಪ್ರಕರಣ: ಪುರುಷನಹಳ್ಳಿ ಗ್ರಾಮದ ರಮೇಶ್ ಕೆ. ಅವರು ತಮ್ಮ ಜಮೀನಿನ ಸರ್ವೇ ನಂ. 78ರ ಪೋಡಿ ನಂತರದ ಹೊಸ ಸರ್ವೇ ನಂಬರ್‌ಗೆ ಸಂಬಂಧಿಸಿದ ಆಕಾರ್ ಬಂದ್, ಹಿಸ್ಸಾ ಟಿಪ್ಪಣ್ಣಿ ಮತ್ತು ಇತರ ದಾಖಲೆಗಳನ್ನು ಕೋರಿದ್ದರು. ಮಾಹಿತಿ ನೀಡದೇ ಇದ್ದುದಲ್ಲದೆ ಆಯೋಗದ ನೋಟಿಸ್‌ಗೆ ಪ್ರತಿಕ್ರಿಯಿಸದೆ ಮೂರು ವಿಚಾರಣೆಗಳಿಗೆ ಸತತ ಗೈರು ಹಾಜರಾಗಿದ್ದರಿಂದ 25 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
- ಮೂರನೇ ಪ್ರಕರಣ: ಬೆಂಗಳೂರು ಕಾಮಾಕ್ಷಿಪಾಳ್ಯದ ಮಂಜುನಾಥ್ ಟಿ. ನಾಯಕ್ ಅವರು ಮಾಲೂರು ತಾಲೂಕಿನ ಚನ್ನಿಗರಾಯಪುರದ ಸರ್ವೇ ನಂ. 6ರ ಸಾಗುವಳಿ ಚೀಟಿ ಹಾಕು ಮತ್ತು ಇತರ ದಾಖಲೆಗಳನ್ನು ಕೋರಿದ್ದರು. ಇಲ್ಲಿಯೂ ಮಾಹಿತಿ ನೀಡದೆ ವಿಚಾರಣೆಗೆ ಗೈರು ಹಾಜರಾಗಿದ್ದ ಕಾರಣ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಈ ಆದೇಶ ಮಾಹಿತಿ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿ ಸಾರ್ವಜನಿಕ ಅಧಿಕಾರಿಗಳು ತೋರುವ ನಿರ್ಲಕ್ಷ್ಯಕ್ಕೆ ಆಯೋಗದ ಕಠಿಣ ನಿಲುವನ್ನು ಸ್ಪಷ್ಟಪಡಿಸುತ್ತದೆ. ಇದು ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.












