ಬೆಂಗಳೂರು: ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿದೆ. ಈ ತೀರ್ಪು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ‘ಹಿಂದೂ ಭಯೋತ್ಪಾದನೆ’ ಅಥವಾ ‘ಕೇಸರಿ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ರೂಪಿಸಲಾದ ಷಡ್ಯಂತ್ರವನ್ನು ಬಯಲಿಗೆಳೆದಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಆರೋಪಿಸಿದ್ದಾರೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪುರೋಹಿತ್, ಮೇಜರ್ ಉಪಾಧ್ಯಾಯ, ಸುಧಾಕರ್ ಚತುರ್ವೇದಿ, ಸಮೀರ್ ಕುಲಕರ್ಣಿ ಮತ್ತು ಅಜಯ್ ರಹಿರ್ಕರ್ ಸೇರಿದಂತೆ ಹಲವು ದೇಶಭಕ್ತ ವ್ಯಕ್ತಿಗಳನ್ನು ಹಿಂದೂಗಳೆಂಬ ಕಾರಣಕ್ಕಾಗಿ ವರ್ಷಗಟ್ಟಲೆ ಜೈಲಿನಲ್ಲಿ ಇರಿಸಲಾಯಿತು. ಇವರನ್ನು ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಪಡಿಸಲಾಯಿತು, ಇದು ಕೇವಲ ವೈಯಕ್ತಿಕ ಅನ್ಯಾಯವಲ್ಲ, ಇಡೀ ಹಿಂದೂ ಸಮುದಾಯವನ್ನೇ ಕೆಣಕುವ ದುಷ್ಟ ಷಡ್ಯಂತ್ರವಾಗಿತ್ತು ಎಂದು ಶ್ರೀ. ಮೋಹನ್ ಗೌಡ ಹೇಳಿದ್ದಾರೆ. ಈ ಪ್ರಕರಣವನ್ನು ಈಗ ಮುಚ್ಚಿಹಾಕಲು ಸಾಧ್ಯವಿಲ್ಲ, ಈ ಷಡ್ಯಂತ್ರ ರೂಪಿಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಂದಿನ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ‘ಹಿಂದೂ ಭಯೋತ್ಪಾದನೆ’ ಎಂಬ ಪದವನ್ನು ಬಳಸಿದ್ದು, ನಂತರ ಅದು ತಪ್ಪು ಎಂದು ಒಪ್ಪಿಕೊಂಡಿದ್ದರು. ಆದರೆ, ಯಾರ ಸೂಚನೆಯ ಮೇರೆಗೆ ಈ ಪದವನ್ನು ಬಳಸಲಾಯಿತು? ಹಿಂದೂ ಸಮುದಾಯದ ಮಾನಹಾನಿಯ ಹಿಂದಿನ ಮಾಸ್ಟರ್‌ಮೈಂಡ್ ಯಾರು? ಎಂಬ ಪ್ರಶ್ನೆಗಳನ್ನು ಶ್ರೀ. ಮೋಹನ್ ಗೌಡ ಎತ್ತಿದ್ದಾರೆ. ವಿಕಿಲೀಕ್ಸ್ ಕೇಬಲ್‌ಗಳ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಹಿಂದೂ ಭಯೋತ್ಪಾದನೆ ದೇಶದಲ್ಲಿ ಪಾಕಿಸ್ತಾನದ ಇಸ್ಲಾಮಿಕ್ ಭಯೋತ್ಪಾದನೆಗಿಂತ ದೊಡ್ಡ ಸಮಸ್ಯೆ’ ಎಂದು ಅಮೆರಿಕಾ ರಾಯಭಾರಿಗೆ ಹೇಳಿಕೆ ನೀಡಿದ್ದರು ಎಂದು ಬಹಿರಂಗವಾಗಿದೆ.
ಹಿಂದೂ ಸಮುದಾಯವನ್ನು ತಪ್ಪಾಗಿ ಭಯೋತ್ಪಾದಕರೆಂದು ಚಿತ್ರಿಸಿ, ದೇಶಭಕ್ತರನ್ನು ಸಿಲುಕಿಸಿ, ತನಿಖೆಯ ಹೆಸರಿನಲ್ಲಿ ಅನ್ಯಾಯ ಮಾಡಿದ ಎಲ್ಲಾ ದೋಷಿಗಳನ್ನು ಕಂಡುಹಿಡಿದು ಕಠಿಣ ಶಿಕ್ಷೆಗೆ ಒಳಪಡಿಸುವುದೇ ನಿಜವಾದ ನ್ಯಾಯ ಎಂದು ಶ್ರೀ. ಮೋಹನ್ ಗೌಡ ಒತ್ತಿ ಹೇಳಿದ್ದಾರೆ.