ನವದೆಹಲಿ: ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಮಾವು ಬೆಳೆಗಾರರಿಗೆ ಸಹಾಯ ಹಸ್ತ ಚಾಚುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ನಫೆಡ್ (NAFED) ಮತ್ತು ಎನ್‌ಸಿಸಿಎಫ್ (NCCF) ಮೂಲಕ ತಕ್ಷಣವೇ ಮಾವು ಖರೀದಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು ಎಂದು ಅವರು ಕೋರಿದ್ದಾರೆ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟದಲ್ಲಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣ, ರೈತರು ಮಾವನ್ನು ರಸ್ತೆಗೆ ಸುರಿಯುವಂತಹ ದುಸ್ಥಿತಿ ಎದುರಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಕೇಂದ್ರ ಸರಕಾರವು ರೈತರಿಗೆ ತುರ್ತು ನೆರವು ಒದಗಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಮಾವು ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು, ಸುಮಾರು 1.39 ಲಕ್ಷ ಹೆಕ್ಟೇರ್‌ನಲ್ಲಿ, ವಿಶೇಷವಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಈ ಜಿಲ್ಲೆಗಳಲ್ಲಿ 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತದೆ. ಆದರೆ, ಈ ವರ್ಷ ಹವಾಮಾನ ವೈಪರೀತ್ಯ ಮತ್ತು ರೋಗ-ಕೀಟಗಳಿಂದ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ ಎಂದು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಕೇಂದ್ರ ಸರಕಾರವು ತಕ್ಷಣ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ, ನಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ಮಾವು ಖರೀದಿ ಆರಂಭಿಸಬೇಕು. ಕನಿಷ್ಠ ಬೆಂಬಲ ಬೆಲೆ ಘೋಷಣೆಯಿಂದ ರೈತರಿಗೆ ಆರ್ಥಿಕ ಭದ್ರತೆ ಒದಗಲಿದೆ,” ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
**ಮಾವು ಬೆಳೆಗಾರರ ಸಂಕಷ್ಟಕ್ಕೆ ಸರಕಾರದಿಂದ ಯಾವುದೇ ನೆರವು ಘೋಷಣೆಯಾಗದಿದ್ದರೆ, ರೈತರಿಗೆ ಇನ್ನಿಲ್ಲದ ಕಷ್ಟವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.