ರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್
ಕಾರವಾರ : ಸಾರ್ವಜನಿಕರು ಮಾಹಿತಿ ಹಕ್ಕು ಕಾಯಿದೆ ಅಡಿ ಸಲ್ಲಿಸುವ ಅರ್ಜಿಗಳಿಗೆ ನಿಗಧಿತ ಅವಧಿಯೊಳಗೆ ಅಗತ್ಯ ಮಾಹಿತಿ ಒದಗಿಸುವುದು ಎಲ್ಲಾ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳ (PIO) ಕಡ್ಡಾಯ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದರು.
ಶನಿವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯಿದೆ ಕುರಿತ ಜಾಗೃತಿ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಾಹಿತಿ ಹಕ್ಕು ಕಾಯಿದೆಯು ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಕಾನೂನುಬದ್ಧವಾಗಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ. ಇದು ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ಕಾಯಿದೆಯಾಗಿ ಬದಲಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲು ಈ ಕಾಯಿದೆ ಸಹಾಯಕವಾಗುತ್ತದೆ” ಎಂದು ಡಾ. ಹರೀಶ್ ಕುಮಾರ್ ಹೇಳಿದರು.
ಅವರು ಮುಂದುವರೆದು, ಕಾಯಿದೆ ಸಂಬಂಧ ಸರ್ವೋಚ್ಚ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳು ನೀಡುವ ತೀರ್ಪುಗಳ ಬಗ್ಗೆ ಮಾಹಿತಿ ಅಧಿಕಾರಿಗಳು ನಿರಂತರ ಅರಿವು ಹೊಂದಿರಬೇಕು ಎಂದು ಒತ್ತಿ ಹೇಳಿದರು. ಕಾಯಿದೆಯ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅರ್ಥಮಾಡಿಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಪ್ರಥಮ ಮೇಲ್ಮನವಿ ಮತ್ತು ಎರಡನೇ ಮೇಲ್ಮನವಿಗಳಿಗೆ ಅವಕಾಶ ನೀಡದಂತೆ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ನಿಗಧಿತ ಅವಧಿಯಲ್ಲಿ ಮಾಹಿತಿ ಒದಗಿಸದ ಅಧಿಕಾರಿಗಳಿಗೆ ₹25,000 ವರೆಗೆ ದಂಡ ವಿಧಿಸುವ ಮತ್ತು ಕರ್ತವ್ಯ ಲೋಪಕ್ಕೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ಮಾಹಿತಿ ಆಯೋಗಕ್ಕಿದೆ ಎಂದು ಅವರು ಎಚ್ಚರಿಸಿದರು.
ಸಾರ್ವಜನಿಕರಿಗೆ ಶೀಘ್ರ ಮತ್ತು ಸಮರ್ಪಕ ಮಾಹಿತಿ ನೀಡಲು ಕಚೇರಿಗಳಲ್ಲಿ ಕಡತಗಳನ್ನು ಸರಿಯಾಗಿ ವರ್ಗೀಕರಣ ಮಾಡಿಟ್ಟುಕೊಳ್ಳಬೇಕು. ಕಡತಗಳನ್ನು ನಿಯಮಾನುಸಾರ ನಾಶಪಡಿಸಿದ್ದಲ್ಲಿ ದಾಖಲೆ ಇರಬೇಕು. ಕಡತ ಕಣ್ಮರೆಯಾದಲ್ಲಿ ಎಫ್‌ಐಆರ್ ದಾಖಲಿಸಬೇಕು; ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ ಡಾ. ಹರೀಶ್ ಕುಮಾರ್, ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲಾ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಅಧಿಕಾರಿಗಳ ವಿವರಗಳು ಹಾಗೂ ಸೆಕ್ಷನ್ 4(1)(a) ಮತ್ತು 4(1)(b) ಅಡಿ ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.
ಮಾಹಿತಿ ಆಯೋಗದ ಇನ್ನೊಬ್ಬ ಆಯುಕ್ತ ಬದ್ರುದ್ದೀನ್ ಕೆ. ಮಾತನಾಡಿ, ಅರ್ಜಿದಾರರು ಕೋರುವ ಮಾಹಿತಿಯನ್ನು ವಿವರವಾಗಿ ಪರಿಶೀಲಿಸಿ, ನಿಗಧಿತ ಶುಲ್ಕ ಪಡೆದು ಕಾಲಮಿತಿಯಲ್ಲಿ ನೀಡಬೇಕು ಎಂದು ಹೇಳಿದರು. ಕಾಯಿದೆಯ ದುರ್ಬಳಕೆ ಕುರಿತು ದೂರುಗಳು ಬಂದಿರುವುದರಿಂದ ಇದುವರೆಗೆ 26 ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ್ಯ ಮಾಹಿತಿ ಆಯೋಗದಲ್ಲಿ 55,400 ಮೇಲ್ಮನವಿ ಅರ್ಜಿಗಳು ಬಾಕಿ ಇದ್ದವು. ಈ ವರ್ಷ ಸಲ್ಲಿಕೆಯಾದ ಅರ್ಜಿಗಳು ಸೇರಿ ಬಹುತೇಕವನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 28,731 ಮೇಲ್ಮನವಿಗಳು ಬಾಕಿ ಇವೆ ಎಂದು ಅವರು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 524 ಅರ್ಜಿಗಳು ಬಾಕಿ ಇದ್ದು, ರಾಜ್ಯದಲ್ಲಿ 17ನೇ ಸ್ಥಾನದಲ್ಲಿದೆ. ಇದರಲ್ಲಿ 164 ಅರ್ಜಿಗಳು ಗ್ರಾಮೀಣಾಭಿವೃದ್ಧಿ (ಆರ್‌ಡಿಪಿಆರ್) ಮತ್ತು 110 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದು, ಉಳಿದವು ಇತರ ಇಲಾಖೆಗಳಿಗೆ ಸೇರಿವೆ ಎಂದು ಬದ್ರುದ್ದೀನ್ ಕೆ. ವಿವರಿಸಿದರು.
ಅರ್ಜಿಗಳನ್ನು ಪ್ರಥಮ ಮೇಲ್ಮನವಿ ಹಂತದಲ್ಲೇ ವಿಲೇವಾರಿ ಮಾಡುವ ಉದ್ದೇಶದಿಂದ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ಹಂತದಲ್ಲಿ ಪರಿಶೀಲನಾ ಸಭೆಗಳನ್ನು ಕಾಲಕಾಲಕ್ಕೆ ನಡೆಸುವಂತೆ ಮತ್ತು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಯನ್ನು ಕಾರ್ಯಸೂಚಿಯಲ್ಲಿ ಸೇರಿಸಿ ಪ್ರಗತಿ ಪರಿಶೀಲಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯಲ್ಲಿ ಕಂದಾಯ, ಅರಣ್ಯ, ಪೊಲೀಸ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳು ಬರುತ್ತಿವೆ ಎಂದು ಉಲ್ಲೇಖಿಸಿದರು. “ಈ ಕಾಯಿದೆ ಸಾರ್ವಜನಿಕರಲ್ಲಿ ಆಡಳಿತದ ಮೇಲೆ ನಂಬಿಕೆ ಮೂಡಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಶೀಘ್ರ ಮಾಹಿತಿ ಒದಗಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಹಿತಿ ಆಯುಕ್ತ ನಾರಾಯಣ ಚನ್ನಾಳ, ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಕ್ಕು ಕಾಯಿದೆ ಕುರಿತು ಸಂವಾದ ಮತ್ತು ಚರ್ಚೆ ನಡೆಯಿತು.
ಈ ಜಾಗೃತಿ ಕಾರ್ಯಗಾರದ ಮುಖ್ಯ ಉದ್ದೇಶ RTI ಅರ್ಜಿಗಳ ಶೀಘ್ರ ವಿಲೇವಾರಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದಾಗಿದೆ.












