ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಸಿದ್ಧಾಂತ. ಈ ಸಿದ್ಧಾಂತವು ಬೆವರಿನ ಸಂಸ್ಕೃತಿಗೆ ಮೌಲ್ಯ ಮತ್ತು ಘನತೆ ತಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಮತ್ತು ಬೆಳಗಾವಿ ಜಿಲ್ಲಾ ಘಟಕದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಪತ್ರಕರ್ತನಾಗಿ ಸಮಾಜವನ್ನು ಎರಡು ಕಣ್ಣುಗಳಿಂದ ನೋಡುತ್ತಿದ್ದ ನನಗೆ, ಸಮಾಜದ ಲಕ್ಷಾಂತರ ಕಣ್ಣುಗಳು ನನ್ನನ್ನು ಗಮನಿಸುತ್ತವೆ ಎಂಬ ಸಾಮಾಜಿಕ ಎಚ್ಚರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಲ್ಲಿ ಕಲಿತೆ. ಏಕಲವ್ಯರ ಬೆರಳುಗಳಿಗೆ ಶಕ್ತಿ ತುಂಬಿ, ಬೆವರಿನ ಸಂಸ್ಕೃತಿಗೆ ಘನತೆ ತರುವ ಕಲೆಯನ್ನು ಅವರಿಂದ ಕಲಿತಿದ್ದೇನೆ,” ಎಂದರು.
“ಸಿದ್ದರಾಮಯ್ಯ ಅವರು ಕೇವಲ ರಾಜಕೀಯ ನಾಯಕರಲ್ಲ, ಒಂದು ಸಿದ್ಧಾಂತ. ಈ ಸಿದ್ಧಾಂತಕ್ಕೆ ಒಂದು ಪರಂಪರೆ ಇದೆ. ಆ ಪರಂಪರೆಯಿಂದ ಸೃಷ್ಟಿಯಾದ ಅವಕಾಶಗಳಿಂದಾಗಿಯೇ ಇಂದು ನಾನು ಈ ಸನ್ಮಾನಕ್ಕೆ ಪಾತ್ರನಾಗಿದ್ದೇನೆ. ಆದ್ದರಿಂದ, ಈ ಸನ್ಮಾನವನ್ನು ಸಿದ್ದರಾಮಯ್ಯ ಅವರ ಪರಂಪರೆಗೆ ಅರ್ಪಿಸುತ್ತೇನೆ,” ಎಂದು ಕೆ.ವಿ. ಪ್ರಭಾಕರ್ ಭಾವುಕರಾಗಿ ನುಡಿದರು.
ಸಾಮಾಜಿಕ ಬದ್ಧತೆಯ ಪಾಠ:
ವಿಧಾನಸೌಧದಲ್ಲಿ ದುಡಿಯುವ ವರ್ಗಗಳು ಮತ್ತು ವಿವಿಧ ಸಮುದಾಯಗಳ ಸಭೆಗಳಲ್ಲಿ ಜನರ ಬಾಯಲ್ಲಿ ಕೇಳಿಬರುವ ಮಾತುಗಳು ತಮ್ಮ ಕರ್ತವ್ಯ ಪ್ರಜ್ಞೆಯನ್ನು ರೂಪಿಸಿವೆ ಎಂದ ಅವರು, “‘ಸಾರ್, ನಮಗೆ ನ್ಯಾಯ ಸಿಕ್ಕರೆ ನಿಮ್ಮ ಅವಧಿಯಲ್ಲೇ ಸಿಗಬೇಕು’ ಎಂಬ ಜನರ ಮಾತುಗಳು ನನ್ನನ್ನು ಎಚ್ಚರದಿಂದ ಕೆಲಸ ಮಾಡುವಂತೆ ಪ್ರೇರೇಪಿಸಿವೆ,” ಎಂದರು. ಸಿದ್ದರಾಮಯ್ಯ ಅವರ ಸಾಮಾಜಿಕ ಬದ್ಧತೆಯು ತಮ್ಮ ಮೇಲೆ ನೇರವಾದ ಪ್ರಭಾವ ಬೀರಿದೆ ಎಂದು ಅವರು ತಿಳಿಸಿದರು.
ಪತ್ರಕರ್ತರ ಬೇಡಿಕೆಗೆ ಸ್ಪಂದನೆ:
ಪತ್ರಕರ್ತರ ಸಮುದಾಯದ 20-25 ವರ್ಷಗಳ ಬೇಡಿಕೆಗಳಿಗೆ ಪರಿಹಾರ ಕಂಡುಕೊಂಡಿದ್ದಕ್ಕೆ ಸಂಘದಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸಾಧನೆಗೆ ಮುಖ್ಯಮಂತ್ರಿಗಳಿಂದ ದೊರೆತ ಶಕ್ತಿ, ಪತ್ರಕರ್ತರ ಸಂಘದ ನಿರಂತರ ಹೋರಾಟ ಮತ್ತು ಸತತ ಪ್ರಯತ್ನಗಳು ಕಾರಣ ಎಂದು ಪ್ರಭಾಕರ್ ಹೇಳಿದರು.
“ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ಅವರಂತಹ ಬದ್ಧತೆಯ ಸಂಘಟಕರ ಬೆಂಬಲದಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಪತ್ರಕರ್ತರ ಸಮಸ್ಯೆಗಳಿಗೆ ಮುಕ್ತಿ ಕೊಡಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ,” ಎಂದು ಅವರು ತಿಳಿಸಿದರು.
ತಾಂತ್ರಿಕ ತೊಡಕುಗಳ ನಿವಾರಣೆಗೆ ಸಹಕಾರ:
ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಲಾಖೆಯ ಕಾರ್ಯದರ್ಶಿ ಕಾವೇರಿ ಮತ್ತು ಆಯುಕ್ತ ಹೇಮಂತ್ ನಿಂಬಾಳ್ಕರ್ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. “ನಿಮ್ಮೆಲ್ಲರ ಒತ್ತಾಯ ಮತ್ತು ಆಗ್ರಹಕ್ಕೆ ಕಿವಿಯಾಗಿದ್ದೇನೆ. ಎಲ್ಲರ ಒಟ್ಟು ಶ್ರಮದಿಂದ ಪತ್ರಕರ್ತರಿಗೆ ಇನ್ನಷ್ಟು ಅನುಕೂಲಗಳು ಒದಗಲಿವೆ,” ಎಂದು ಪ್ರಭಾಕರ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ದೀಪಕ್ ಕುರಂದವಾಡೆ, KUWJ ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಭೀಮಶಿ ಎಲ್. ಜಾರಕಿಹೊಳಿ, ಸಂಘದ ಮುಖಂಡ ಮದನ್ ಗೌಡ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
ಕೆ.ವಿ. ಪ್ರಭಾಕರ್ ಅವರಿಗೆ ಸನ್ಮಾನ ಮತ್ತು ದೀಪಕ್ ಕುರಂದವಾಡೆ ತಂಡದ ಪ್ರೀತಿ, ಅಭಿಮಾನಕ್ಕೆ ಧನ್ಯವಾದ ಸಲ್ಲಿಸಿದ ಅವರು, ಈ ಬೆಂಬಲವೇ ತಮ್ಮ ಕಾರ್ಯಕ್ಕೆ ಸ್ಫೂರ್ತಿಯಾಗಿದೆ ಎಂದರು.