ಶಿವಮೊಗ್ಗ: ಮಧ್ಯಪ್ರಾಚ್ಯದ ಯುದ್ಧ ಉದ್ವಿಗ್ನತೆಯ ನಡುವೆ ಅರಬ್ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೇ, ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿ ಹಾಗೂ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದರು. ಬಳ್ಳಾರಿಯ 30 ಮಂದಿ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ತೊಂದರೆಯಿಲ್ಲದೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ ಎಂದರು. ದುಬೈ ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದು, ಅದು ತೆರೆಯುತ್ತಿದ್ದಂತೆ ಸುರಕ್ಷಿತ ವಾಪಸಾತಿಗೆ ವ್ಯವಸ್ಥೆ ಮಾಡಲಾಗುವುದು. ದುಬೈಯಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ಸೇರಿದಂತೆ ಹಲವರು ಹೋಟೆಲ್‌ಗಳಲ್ಲಿ ಸುರಕ್ಷಿತವಾಗಿದ್ದಾರೆ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.
ಅಮೆರಿಕಾದ ದ್ವಂದ್ವ ನೀತಿಗೆ ಖಂಡನೆ
ಅಮೆರಿಕಾ ಒಂದೆಡೆ ಶಾಂತಿಯನ್ನು ಪ್ರತಿಪಾದಿಸುತ್ತಾ ಮತ್ತೊಂದೆಡೆ ಯುದ್ಧ ಮಾಡುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಇರಾನ್ ಮೇಲಿನ ದಾಳಿಯನ್ನು ಅನಗತ್ಯ ಎಂದು ಖಂಡಿಸಿದರು. “ಅಮೆರಿಕಾದ ತದ್ವಿರುದ್ಧ ನಿಲುವನ್ನು ನಾನು ಖಂಡಿಸುತ್ತೇನೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಖಮೇನಿ ಹತ್ಯೆಗೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ವಿದ್ಯುತ್ ದರ ಏರಿಕೆ ಇಲ್ಲ
ಏಪ್ರಿಲ್‌ನಲ್ಲಿ ವಿದ್ಯುತ್ ದರ ಏರಿಕೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗಲ್ಫ್ ದೇಶಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ಸಾವಿರಾರು ಭಾರತೀಯರು ಸೇರಿದಂತೆ ಕನ್ನಡಿಗರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.











