ಬೆಂಗಳೂರು: ಕೇಂದ್ರ ಸರ್ಕಾರವು 2027ರಲ್ಲಿ ನಡೆಸಲಿರುವ ಜನಗಣತಿಯ ಅಂಗವಾಗಿ ಪರಿಚಯಿಸಿರುವ ಸ್ವಯಂ ಗಣತಿ ವ್ಯವಸ್ಥೆಯನ್ನು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಇಂದು ಬುಧವಾರ ತಮ್ಮ ಮೊಬೈಲ್ ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಿದರು.
2026ರ ಏಪ್ರಿಲ್ 1ರಿಂದ 15ರವರೆಗೆ ಎಲ್ಲಾ ನಾಗರಿಕರು ಅಧಿಕೃತ ಪೋರ್ಟಲ್ se.census.gov.in ಮೂಲಕ ತಮ್ಮ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸ್ವಯಂ ದಾಖಲಿಸಿಕೊಳ್ಳಬಹುದು ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.
“ನಮ್ಮ ಜನಗಣತಿ – ನಮ್ಮ ಅಭಿವೃದ್ಧಿ” ಎಂಬ ಧ್ಯೇಯವಾಕ್ಯದೊಂದಿಗೆ ಸರ್ಕಾರವು ಜನಗಣತಿ 2027ರನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ಪ್ರಕ್ರಿಯೆ ಬಹಳ ಸರಳ ಮತ್ತು ಸುರಕ್ಷಿತವಾಗಿದೆ ಎಂದು ಅವರು ಹೇಳಿದರು.
ತಮ್ಮ ಅನುಭವ ಹಂಚಿಕೊಳ್ಳುತ್ತಾ ಡಾ. ಶಾಲಿನಿ ರಜನೀಶ್ ಅವರು ಮುಂದುವರೆದು ಹೇಳಿದರು, “ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಕೇವಲ 5 ರಿಂದ 10 ನಿಮಿಷಗಳಲ್ಲಿ ಸ್ವಯಂ ಗಣತಿ ಪೂರ್ಣಗೊಳಿಸಬಹುದು. ಪ್ರಕ್ರಿಯೆ ಮುಗಿದ ನಂತರ ಅರ್ಜಿ ಸಂಖ್ಯೆಯನ್ನು ಪಡೆಯಲಾಗುತ್ತದೆ. ಈ ಸಂಖ್ಯೆಯನ್ನು ಏಪ್ರಿಲ್ 16ರಿಂದ ಮೇ 15ರವರೆಗೆ ಮನೆಮನೆಗೆ ಬರುವ ಗಣತಿದಾರರಿಗೆ ನೀಡಿದರೆ, ಅವರು ತ್ವರಿತವಾಗಿ ಗಣತಿ ಪೂರ್ಣಗೊಳಿಸುವುದರ ಜೊತೆಗೆ ಯಾವುದೇ ತಿದ್ದುಪಡಿ ಅಗತ್ಯವಿದ್ದಲ್ಲಿ ಮಾಡಿಕೊಳ್ಳಬಹುದು.”
ಮೊಬೈಲ್ ಅಥವಾ ಕಂಪ್ಯೂಟರ್ ಸೌಲಭ್ಯವಿಲ್ಲದವರು ಸಮೀಪದ ಕಂಪ್ಯೂಟರ್ ಕೇಂದ್ರಗಳಿಂದ ಅಥವಾ ಸ್ನೇಹಿತರ ಮೊಬೈಲ್ ಮೂಲಕವೂ ತಮ್ಮ ಮಾಹಿತಿಯನ್ನು ಸಲ್ಲಿಸಿ ನೋಂದಣಿ ಸಂಖ್ಯೆ ಪಡೆಯಬಹುದು ಎಂದು ಅವರು ಸಲಹೆ ನೀಡಿದರು.
ಜನಗಣತಿ ರಾಜ್ಯ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಮಹತ್ವದ ಕಾರ್ಯವಾಗಿದೆ ಎಂದು ಒತ್ತಿ ಹೇಳಿದ ಮುಖ್ಯ ಕಾರ್ಯದರ್ಶಿ, “ಇದು ದತ್ತಾಂಶ ಆಧಾರಿತ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ. ಆರೋಗ್ಯ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಮರ್ಪಕ ಸಂಪನ್ಮೂಲ ಹಂಚಿಕೆಗೆ ಇದು ದಾರಿ ತೋರುತ್ತದೆ. ಪ್ರತಿ ನಾಗರಿಕರ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ. ಇದು ಕೇವಲ ಕರ್ತವ್ಯವಲ್ಲ, ಕರ್ನಾಟಕದ ಅಭಿವೃದ್ಧಿಗೆ ನೀಡುವ ನಿಮ್ಮ ಕೊಡುಗೆಯಾಗಿದೆ” ಎಂದು ಹೇಳಿದರು.
ನಿಖರವಾದ ಮಾಹಿತಿ ನೀಡುವುದರ ಮೂಲಕ ನಾಳೆಯ ಉತ್ತಮ ನೀತಿಗಳು ಮತ್ತು ಸೇವೆಗಳಿಗೆ ಆಧಾರವಾಗುತ್ತದೆ ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು. ಜನಗಣತಿಯಲ್ಲಿ ಯಾರೂ ಬಿಟ್ಟು ಹೋಗದಂತೆ ಸರ್ಕಾರ ಮುತುವರ್ಜಿ ವಹಿಸಿದೆ. ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ ಜನಗಣತಿ 2027 ಅನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸೋಣ ಎಂದು ಅವರು ಕರೆ ನೀಡಿದರು.
ಈ ವೇಳೆ ಜನಗಣತಿ ನಿರ್ದೇಶಕ ರಾಮಚಂದ್ರನ್ ಅವರು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸ್ವಯಂ ಗಣತಿ ವ್ಯವಸ್ಥೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.












