ಗದಗ: ಭಾರತವು ಪುಣ್ಯಭೂಮಿಯಾಗಿದ್ದು, ಇಲ್ಲಿ ಅನೇಕ ಸಾಧು-ಸಂತರು, ಪುಣ್ಯಾತ್ಮರು ಮತ್ತು ಮಠಾಧೀಶರು ಈ ಭೂಮಿಯನ್ನು ಪಾವನಗೊಳಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಗದಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮುಳಗುಂದ ಶ್ರೀ ಗ್ರಾಮದೇವತೆ ಟೋಪ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಸಂಜೆ ಭಾಗವಹಿಸಿ ಅವರು ಮಾತನಾಡಿದರು.
“ಭಾರತದ ಸಂಸ್ಕೃತಿ ಶ್ರೀಮಂತವಾದದ್ದು, ಇಂತಹ ಪವಿತ್ರ ಭೂಮಿಯಲ್ಲಿ ಜನಿಸಿದ್ದೇ ನಮ್ಮ ಪುಣ್ಯ. ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಒಡ್ಡಲು ಜಾತ್ರೆಗಳಂತಹ ಆಚರಣೆಗಳು ಸಹಕಾರಿಯಾಗಿವೆ,” ಎಂದು ಸಚಿವರು ತಿಳಿಸಿದರು. “ಮಹಿಳೆಯರು ಶಕ್ತಿಯ ದ್ಯೋತಕವಾಗಿದ್ದು, ಸಮೃದ್ಧಿಯ ಸಂಕೇತವಾಗಿದ್ದಾರೆ. ಆದ್ದರಿಂದ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ,” ಎಂದು ಅವರು ಹೇಳಿದರು.
ಸಚಿವರು ತಮ್ಮ ಭಾಷಣದಲ್ಲಿ, “ನಮ್ಮ ಸರ್ಕಾರ ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣನವರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಜಾತಿ-ಧರ್ಮ ಭೇದವಿಲ್ಲದೆ ಆಡಳಿತ ನಡೆಸುತ್ತಿದೆ. ಬಸವಣ್ಣನವರು ಹೇಳಿದಂತೆ ‘ದಯೆಯೇ ಧರ್ಮದ ಮೂಲ’ ಎಂಬ ತತ್ವವನ್ನು ಅನುಸರಿಸುತ್ತಿದ್ದೇವೆ,” ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಈ ಭಾಗದ ಶಾಸಕರಾದ ಎಚ್.ಕೆ. ಪಾಟೀಲರನ್ನು ಶ್ಲಾಘಿಸಿದ ಸಚಿವರು, “ಎಚ್.ಕೆ. ಪಾಟೀಲರು ಬುದ್ಧಿವಂತ ಮತ್ತು ಪ್ರಜ್ಞಾವಂತ ಸಚಿವರಾಗಿದ್ದಾರೆ. ಈ ಭಾಗದ ಜನರು ಅವರನ್ನು ಪಡೆದಿರುವುದು ಭಾಗ್ಯ. ಅವರು ಈ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸವದತ್ತಿ ಯಲ್ಲಮ್ಮ ಪ್ರಾಧಿಕಾರ ರಚನೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ. ಜೊತೆಗೆ, ದೇವಸ್ಥಾನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 110 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಳಗಾನೂರದ ಪರಮಪೂಜ್ಯ ಶಿವಶಾಂತ ವೀರ ಶರಣರು, ನೀಲಗುಂದದ ಶ್ರೀ ಪ್ರಭುಲಿಂಗ ದೇವರು, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಾತ್ರಾ ಕಮೀಟಿಯ ಅಧ್ಯಕ್ಷ ಎಂ.ಡಿ. ಬಟ್ಟೂರ್, ಉಪಾಧ್ಯಕ್ಷರಾದ ಅನಸೂಯಾ ಸೋಮಗಿರಿ, ರಾಮಣ್ಣ ಕಮೊಜಿ, ನಾಗರಾಜ ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವರು ಜಾತ್ರೆ ಗದ್ದುಗೆಗೆ ತೆರಳಿ ಶ್ರೀ ಗ್ರಾಮದೇವತೆಯ ದರ್ಶನ ಪಡೆದರು. ಜಾತ್ರಾ ಸಮಿತಿಯ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.