ತ್ಯಾಜ್ಯದಿಂದ ಶಕ್ತಿ ಉತ್ಪಾದನೆಗೆ ಸರ್ಕಾರದ ಸಂಕಲ್ಪ
ಬೆಂಗಳೂರು: ಬೆಂಗಳೂರಿನ ದಾಸನಪುರ, ಕೋಲಾರ ಮತ್ತು ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ತಲಾ 50 ಟಿಪಿಡಿ (ಟನ್ ಪ್ರತಿ ದಿನ) ಸಾಮರ್ಥ್ಯದ ಬಯೋ ಸಿಎನ್‌ಜಿ ಪ್ಲಾಂಟ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಘೋಷಿಸಿದ್ದಾರೆ.
ಎಪಿಎಂಸಿಗಳಲ್ಲಿ ದಿನಕ್ಕೆ 20 ರಿಂದ 30 ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ‘ಶೂನ್ಯ ತ್ಯಾಜ್ಯ’ ಮಾರುಕಟ್ಟೆಗಳನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. “ಈ ಯೋಜನೆಯಿಂದ ಎಪಿಎಂಸಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ, ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ನವೀಕರಣ ಶಕ್ತಿಯನ್ನು ಉತ್ಪಾದಿಸಬಹುದು,” ಎಂದು ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ಈ ಯೋಜನೆಯಡಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಒಟ್ಟು 24.96 ಕೋಟಿ ರೂ. ವೆಚ್ಚದಲ್ಲಿ ಈ ಮೂರು ಎಪಿಎಂಸಿಗಳಲ್ಲಿ ಬಯೋ ಸಿಎನ್‌ಜಿ ಪ್ಲಾಂಟ್‌ಗಳನ್ನು ನಿರ್ಮಿಸಲಾಗುವುದು. ಈ ಕುರಿತ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಇತರ ಕೆಲವು ಎಪಿಎಂಸಿಗಳಲ್ಲೂ ಸಿಎನ್‌ಜಿ ಪ್ಲಾಂಟ್ ಸ್ಥಾಪನೆಯ ಉದ್ದೇಶವಿದ್ದರೂ, ಕೆಲವು ಸ್ಥಳಗಳಲ್ಲಿ ತ್ಯಾಜ್ಯದ ಪ್ರಮಾಣ ಕಡಿಮೆ ಇರುವುದು ಮತ್ತು ನಗರಸಭೆ, ನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯ ಮಿಶ್ರಿತವಾಗಿರುವುದರಿಂದ ಗುಣಮಟ್ಟದ ಖಾತರಿ ಇಲ್ಲದಿರುವ ಕಾರಣ, ಸದ್ಯಕ್ಕೆ ದಿನಕ್ಕೆ ಕನಿಷ್ಠ 20 ರಿಂದ 30 ಟನ್ ತ್ಯಾಜ್ಯ ಉತ್ಪಾದನೆಯಾಗುವ ಈ ಮೂರು ಎಪಿಎಂಸಿಗಳಲ್ಲಿ ಮಾತ್ರ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಈ ಮೂಲಕ ರಾಜ್ಯ ಸರ್ಕಾರವು ತ್ಯಾಜ್ಯ ನಿರ್ವಹಣೆಯ ಜೊತೆಗೆ ನವೀಕರಣ ಶಕ್ತಿ ಉತ್ಪಾದನೆಗೆ ಮಹತ್ವದ ಕ್ರಮ ಕೈಗೊಂಡಿದೆ. ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಗೆ ಒತ್ತು ನೀಡುವ ಈ ಯೋಜನೆ ರಾಜ್ಯದಲ್ಲಿ ಗಮನ ಸೆಳೆದಿದೆ.