ಬೆಂಗಳೂರು: ಶ್ರೀ ಭ್ರಮರಂಭ ಸಮೇತ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ನವೆಂಬರ್ ೮, ೯ ಮತ್ತು ೧೦ರಂದು ಮೂರು ದಿನಗಳ ಕಾಲ ೯ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷತ್ ಜರಗಲಿದೆ. ಈ ಕುರಿತು ಕಾಡುಮಲ್ಲೇಶ್ವರ ಗೆಳಯರ ಬಳಗದಿಂದ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು.
ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ, ಉಪಾಧ್ಯಕ್ಷೆ ಲೀಲಾ ಸಂಪಿಗೆ, ಸಂಘಟನೆಯ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ, ಚಂದ್ರಶೇಖರ್ ನಾಯ್ಡು, ಸೋಮಶೇಖರ್, ನರಸಿಂಹಪ್ರಭು, ಸುಧಾಕರ್, ರಾಜಶಶಿಧರ್ ಹಾಗೂ ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು

ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, “ಶ್ರೀ ಕಾಡು ಮಲ್ಲೇಶ್ವರ ಗೆಳಯರ ಬಳಗ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ. ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವನ್ನು ಪರಿಸರ ಸ್ನೇಹಿ ವಾತಾವರಣವಾಗಿ ನಿರ್ಮಿಸಲು ಬಳಗಕ್ಕೆ ಸಾಧ್ಯವಾಗಿದೆ” ಎಂದು ಹೇಳಿದರು.
ಪರಿಷತ್ ವಿವರಗಳು ಈ ಕೆಳಗಿನಂತಿವೆ:
- ನವೆಂಬರ್ ೮: ಸಂಜೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ನಂದಿ ಮೂರ್ತಿಗೆ ಕಡಲೆಕಾಯಿ ಅಭಿಷೇಕದೊಂದಿಗೆ ಉದ್ಘಾಟನೆ. ಸಂಜೆ ೫ ಗಂಟೆಗೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶ್ರೀಮತಿ ವೆಂಕಟಮ್ಮ ಮಟ್ಟ ಬಾರ್ಲು, ಶ್ರೀಮತಿ ಸರೋಜಮ್ಮ ಬನ್ನಪ್ಪ ಉದ್ಘಾಟಿಸಲಿದ್ದಾರೆ. ಸಂಜೆ ೬:೩೦ಕ್ಕೆ ಹುಣ್ಣಿಮೆ ಹಾಡು-೨೨೨: ಪುಟ್ಟಣ್ಣ ಕಣಗಾಲ್ ಸ್ಮರಣೆಯಲ್ಲಿ ಸವಿತಾ ಗಣೇಶ್ ಪ್ರಸಾದ್ ನೇತೃತ್ವದ ಗೀತೆಗಾಯನ. ಮುಖ್ಯ ಅತಿಥಿಗಳು: ಶಾಸಕ ವಿಜಯಾನಂದ ಎಸ್. ಕಾಶಪ್ಪನವರ್, ವೀರಲೋಕ ಬುಕ್ಸ್ ಸಂಸ್ಥಾಪಕ ವೀರಕಪುತ್ರ ಎಂ. ಶ್ರೀನಿವಾಸ್.
- ನವೆಂಬರ್ ೯: ಹುಣ್ಣಿಮೆ ಹಾಡು-೨೨೩: ಶ್ರೀಮತಿ ಮಧುಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದ ಭಾವ ಸಂಗೀತ ಸಂಗಮ. ಸಂಜೆ ೫ ಗಂಟೆಗೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಸಮಾರಂಭ. ಡಾ. ರಾಜ್‌ಕುಮಾರ್ ಮಾಧುರ್ಯ ನೆನಪಿನಲ್ಲಿ ಗರ್ತಿಕೆರೆ ರಾಘಣ್ಣಗೆ ೧೦ ಸಾವಿರ ರೂ. ನಗದು ಪುರಸ್ಕಾರ. ನಟಿ ಸುಧಾರಾಣಿ ಮತ್ತು ನಟ ವಿಜಯರಾಘವೇಂದ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
- ನವೆಂಬರ್ ೧೦: ಸಂಜೆ ೫ ಗಂಟೆಗೆ ಪರಿಷತ್ ಸಮಾರೋಪ. ಸಂಜೆ ೬:೩೦ಕ್ಕೆ ಹುಣ್ಣಿಮೆ ಹಾಡು-೨೨೫: ಕಾರ್ತಿಕ್ ಮಣಿ ಮತ್ತು ಜರ್ಮನಿಯ ಮ್ಯಾಗ್ನಸ್ ಡವ್ ನರ್ ತಂಡದ ಕರ್ನಾಟಕ-ಜರ್ಮನಿ ಸಂಗೀತ ತಾಳವಾದ್ಯ ಕಾರ್ಯಕ್ರಮ.
ದೈವ ನಂಬಿಕೆ ಇರಲಿ, ಮೂಢನಂಬಿಕೆ ಇಲ್ಲದಂತೆ ರೈತ ಸ್ನೇಹಿ ಪರಿಷತ್ ಆಯೋಜಿಸಲಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರದ ರೈತರು ಮತ್ತು ಬೀದಿ ವ್ಯಾಪಾರಿಗಳಿಗೆ ಉಚಿತ ಮಾರಾಟ ಅವಕಾಶ. ಮಧ್ಯವರ್ತಿಗಳಿಲ್ಲದೇ ರೈತರಿಂದ ನೇರ ಗ್ರಾಹಕ ಮಾರಾಟದ ಗ್ರಾಮೀಣ ಸಂತೆ ಮಾದರಿ.
ಪ್ಲಾಸ್ಟಿಕ್ ಮುಕ್ತ ಪರಿಷತ್: ೧ ಲಕ್ಷಕ್ಕೂ ಹೆಚ್ಚು ಬಟ್ಟೆ ಮತ್ತು ಪೇಪರ್ ಬ್ಯಾಗ್ ವಿತರಣೆ. ವೆಂಡಿಂಗ್ ಯಂತ್ರದಲ್ಲಿ ವೇಸ್ಟ್ ಪ್ಲಾಸ್ಟಿಕ್ ಬಾಟಲ್ ಹಾಕಿದರೆ ೧ ರೂ. ನೀಡಲಾಗುವುದು. ಸ್ವಚ್ಛತಾ ಅಭಿಯಾನ ಕೂಡ ಆಯೋಜನೆ.












