ಬೆಳಗಾವಿ: ಬೆಳಗಾವಿ ಮೃಗಾಲಯದಲ್ಲಿ ಸಾಂಕ್ರಾಮಿಕ ಗಲಗಂಟು (ಗಳಲೆ) ರೋಗ ಹರಡಿದ ಪರಿಣಾಮ 31 ಕೃಷ್ಣಮೃಗಗಳು ಸಾವನ್ನಪ್ಪಿವೆ. ಈ ರೋಗ ಇತರ ವನ್ಯಜೀವಿಗಳಿಗೆ ಹರಡದಂತೆ ತಡೆಯಲು ಅರಣ್ಯ ಇಲಾಖೆ ತೀವ್ರ ಮುಂಜಾಗೃತಾ ಕ್ರಮ ಕೈಗೊಂಡಿದೆ.
ಮೃಗಾಲಯದ 14 ವಿಭಾಗಗಳಲ್ಲೂ ರೋಗ ಹರಡದಂತೆ ವ್ಯಾಪಕವಾಗಿ ಔಷಧಿ ಸಿಂಪಡಣೆ ನಡೆಸಲಾಗುತ್ತಿದೆ. ಕೃಷ್ಣಮೃಗಗಳು ಸಾವನ್ನಪ್ಪಿದ ಪ್ರದೇಶವನ್ನು ಸಂಪೂರ್ಣವಾಗಿ ಹಸಿರು ಪರದೆಯಿಂದ ಮುಚ್ಚಿ ಬ್ಲಾಕ್ ಮಾಡಲಾಗಿದೆ.
ಈ ಮೃಗಾಲಯದಲ್ಲಿ ಹುಲಿ, ಸಿಂಹ, ಕರಡಿ, ಜಿಂಕೆ, ಮೊಸಳೆ, ಕತ್ತೆಕಿರುಬ, ನವಿಲು ಸೇರಿದಂತೆ ಒಟ್ಟು 195ಕ್ಕೂ ಹೆಚ್ಚು ವನ್ಯಜೀವಿಗಳಿವೆ. ರೋಗದ ತೀವ್ರತೆಯನ್ನು ಗಮನಿಸಿ ಡಿಎಫ್‌ಒ ಕ್ರಾಂತಿ ಮತ್ತು ಎಸಿಎಫ್ ನಾಗಿರುವ ನಾಗರಾಜ್ ನೇತೃತ್ವದಲ್ಲಿ ವಿಶೇಷ ತಂಡ ದಿನವಿಡೀ ನಿಗಾ ವಹಿಸಿದೆ.
ಉಳಿದ 7 ಕೃಷ್ಣಮೃಗಗಳು ಚಿಕಿತ್ಸೆಗೆ ಒಳಗಾಗುತ್ತಿದ್ದು, ಅವುಗಳ ಆರೋಗ್ಯ ಕ್ರಮೇಣ ಚೇತರಿಸಿಕೊಳ್ಳುತ್ತಿದೆ ಎಂದು ಆಸರೆಯ ಸುದ್ದಿಯಾಗಿದೆ.
ಗುಜರಾತ್‌ನ ವಡೋದರಾ ಹಾಗೂ ಬೆಂಗಳೂರಿನ ಪ್ರಸಿದ್ಧ ಪಶುವೈದ್ಯ ತಜ್ಞರ ಸಲಹೆ ಮೇರೆಗೆ ಔಷಧೋಪಚಾರ ಮತ್ತು ವಿಶೇಷ ಆಹಾರ ನೀಡಲಾಗುತ್ತಿದೆ. ಮೃಗಾಲಯದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ರೋಗ ಹರಡದಂತೆ ಅಲರ್ಟ್ ಘೋಷಿಸಿ ಸೂಚನೆ ನೀಡಲಾಗಿದೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೋಗ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.











