ದಕ್ಷಿಣ ಭಾರತದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಯಾದ ಕೆವಿಎನ್ (KVN Productions) ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದೆ. ಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕೆವಿಎನ್, ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರವನ್ನು ನಿರ್ಮಿಸಲು ಮುಂದಾಗಿದೆ ಎಂದು ಘೋಷಿಸಿದೆ.
ಕೆವಿಎನ್ ಸಂಸ್ಥೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ಸಿಕ್ ಮತ್ತು ಕೆಡಿ ಚಿತ್ರಗಳನ್ನು ನಿರ್ಮಿಸುತ್ತಿದ್ದು, ತಮಿಳಿನಲ್ಲಿ ದಳಪತಿ ವಿಜಯ್ ಅವರ ಜನ ನಾಯಗನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪ್ರವೇಶಿಸಿದೆ. ಇದೀಗ ತೆಲುಗು ಚಿತ್ರರಂಗದತ್ತ ಗಮನ ಹರಿಸಿರುವ ಕೆವಿಎನ್, ಚಿರಂಜೀವಿ ಅವರ ಮುಂದಿನ ಬೃಹತ್ ಯೋಜನೆಗೆ ಬಂಡವಾಳ ಹೂಡಲು ಸಜ್ಜಾಗಿದೆ.
ಚಿರಂಜೀವಿಯ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಘೋಷಣೆ
ಮೆಗಾಸ್ಟಾರ್ ಚಿರಂಜೀವಿ ಅವರ 70ನೇ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಈ ಚಿತ್ರದ ಘೋಷಣೆಯನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವುದು ನಿರ್ದೇಶಕ ಬಾಬಿ ಕೊಲ್ಲಿ. ಈ ಹಿಂದೆ ಚಿರಂಜೀವಿ ಅವರೊಂದಿಗೆ ವಾಲ್ತೇರು ವೀರಯ್ಯ ಚಿತ್ರದಲ್ಲಿ ಕೆಲಸ ಮಾಡಿದ್ದ ಬಾಬಿ, ಈಗ ಮತ್ತೊಮ್ಮೆ ಚಿರಂಜೀವಿ ಜೊತೆಗೆ ಕೈಜೋಡಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರ: ದಸರಾಕ್ಕೆ ಲಾಂಚ್
ಚಿರಂಜೀವಿ, ಬಾಬಿ ಕೊಲ್ಲಿ ಮತ್ತು ಕೆವಿಎನ್ ಕಾಂಬಿನೇಷನ್‌ನ ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿದೆ. ದಸರಾ ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಲಾಂಚ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದ್ದು, 2025ರ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ತೆಲುಗು ಚಿತ್ರರಂಗದಲ್ಲಿ ಕೆವಿಎನ್‌ನ ಈ ದಿಟ್ಟ ಹೆಜ್ಜೆ ಹಾಗೂ ಚಿರಂಜೀವಿಯ ಬೃಹತ್ ಸಿನಿಮಾ ಯೋಜನೆಯಿಂದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.