ಬೆಂಗಳೂರು: ನಮ್ಮ ಮೆಟ್ರೋ ಸಂಸ್ಥೆ ಬಿಎಂಆರ್ಸಿಎಲ್ ಇದೀಗ ಕನ್ನಡ ವಿರೋಧಿ ನಿಲುವಿಗೆ ಒಳಗಾಗಿದಿಯೆ? ಮೆಟ್ರೋ ಟ್ರೈನ್ ಆಪರೇಟರ್ ಹುದ್ದೆಗಳಿಗೆ ಕನ್ನಡದ ಅಭ್ಯರ್ಥಿಗಳನ್ನು ವಂಚಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೈದರಾಬಾದ್, ಚೆನ್ನೈ ಮೆಟ್ರೋ ಉದ್ಯೋಗಿಗಳಿಗೆ ಒಲವು?
ಬಿಎಂಆರ್ಸಿಎಲ್ ಹಿಗ್ಗಿ 50 ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಆದರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ 3 ವರ್ಷಗಳ ಅನುಭವ ಅಗತ್ಯವಿರಬೇಕೆಂದು ನಿಯಮ ವಿಧಿಸಲಾಗಿದೆ. ಇಲ್ಲಿ ಪ್ರಮುಖ ಅಂಶವೇನೆಂದರೆ, ಕರ್ನಾಟಕ ಮೆಟ್ರೋದಲ್ಲಿ ಈ ಮಟ್ಟದ ಅನುಭವ ಹೊಂದಿರುವ ಕನ್ನಡಿಗ ಅಭ್ಯರ್ಥಿಗಳೇ ಇಲ್ಲ!
ಆದರೆ, ಹೈದರಾಬಾದ್ ಮತ್ತು ಚೆನ್ನೈ ಮೆಟ್ರೋಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಟ್ರೈನ್ ಆಪರೇಟರ್‌ಗಳಿಗೆ ಮಾತ್ರ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಬೇರೆ ರಾಜ್ಯದ ಅಭ್ಯರ್ಥಿಗಳಿಗೇ ಅವಕಾಶ ದೊರೆಯುವಂತೆ ಪ್ಲಾನ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
HR ಡಿಪಾರ್ಟ್ಮೆಂಟ್‌ನಲ್ಲಿ ಬೇರೆ ರಾಜ್ಯದ ಪ್ರಭಾವ?
ಮೆಟ್ರೋ HR ವಿಭಾಗದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಅಧಿಕಾರಿಗಳಿದ್ದು, ತಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಈ ರೀತಿಯ ನಿಯಮಾವಳಿಗಳನ್ನು ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ನಿಯಮಗಳ ಮೂಲಕ ಕನ್ನಡಿಗರನ್ನು ಹೊರಗಿಟ್ಟು, ಬೇರೆ ರಾಜ್ಯದ ಅಭ್ಯರ್ಥಿಗಳನ್ನು ಬಲವಂತವಾಗಿ ನೇಮಕ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕನ್ನಡಕ್ಕೆ ತೊಡಕು, ಆದರೆ ಕನ್ನಡ ಕಲಿಯಲು 1 ವರ್ಷ ಸಮಯ?
ಉದ್ಯೋಗಕ್ಕೆ ಆಯ್ಕೆಯಾದ ನಂತರ ಕನ್ನಡ ಬಾರದ ಅಭ್ಯರ್ಥಿಗಳಿಗೆ ಒಂದು ವರ್ಷದಲ್ಲಿ ಕನ್ನಡ ಕಲಿಯಲು ಅವಕಾಶ ನೀಡಲಾಗಿದೆ. ಆದರೆ ಕನ್ನಡಿಗರು ಈ ಹುದ್ದೆಗಳಿಗೆ ಅರ್ಜಿ ಹಾಕಲು ಸಾಧ್ಯವಿಲ್ಲ ಎಂಬುದೇ ದುರಂತ!
ಮೆಟ್ರೋನಲ್ಲಿ ಕನ್ನಡಿಗರ ಭವಿಷ್ಯ ಏನು?
“ನಮ್ಮ ಮೆಟ್ರೋದಲ್ಲಿ ಕನ್ನಡಿಗರು ಕೆಲಸಕ್ಕೆ ಸೇರಿಕೊಂಡರೆ ಯೂನಿಯನ್ ಮಾಡುತ್ತಾರೆ, ಪ್ರತಿಭಟನೆ ಮಾಡುತ್ತಾರೆ” ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕನ್ನಡಿಗರಿಗೆ ಅವಕಾಶ ಸಿಗದಂತೆ ನಿಯಮ ರೂಪಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಕುರಿತು ಬಿಎಂಆರ್ಸಿಎಲ್ ಮೇಲ್ದರ್ಜೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ ಎಂದು ರಾಜ್ಯದ ವಿದ್ಯಾರ್ಥಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿವೆ.
ನಮ್ಮ ಮೆಟ್ರೋ – ನಮ್ಮ ಭಾಷೆ, ನಮ್ಮ ಹಕ್ಕು!