ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಮತ್ತೊಮ್ಮೆ ಭೀಕರ ದುರಂತಕ್ಕೆ ಕಾರಣವಾಗಿದೆ. ಕೋಗಿಲು ಕ್ರಾಸ್ ಬಳಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅವಘಡದಲ್ಲಿ ಆಟೋ ಚಾಲಕ ಖಾಸಿಂ ಸಾಬ್ (35) ಮೃತಪಟ್ಟಿದ್ದಾರೆ.
ಘಟನೆಯ ವಿವರ: ಮಧ್ಯರಾತ್ರಿ 12:30ರ ಸುಮಾರಿಗೆ ಏರ್ಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿ ಸಂಬಂಧ 18 ಚಕ್ರದ ಲಾರಿಯಲ್ಲಿ ವೈಡಕ್ಟ್ ಅನ್ನು ಸಾಗಿಸಲಾಗುತ್ತಿತ್ತು. ಕೋಗಿಲು ಕ್ರಾಸ್ ಸರ್ಕಲ್ ನಲ್ಲಿ ಲಾರಿ ತಿರುವು ತೆಗೆದುಕೊಳ್ಳುವಾಗ, ಲಾರಿಯ ಚಾರ್ಸಿಗೆ ಟಚ್ ಆದ ವೈಡಕ್ಟ್ ರಸ್ತೆ ಬದಿಯಲ್ಲಿದ್ದ ಆಟೋ ಮೇಲೆ ಉರುಳಿದೆ. ಆ ವೇಳೆಗೆ ಆಟೋದಲ್ಲಿದ್ದ ಪ್ಯಾಸೆಂಜರ್ ತಪ್ಪಿಸಿಕೊಳ್ಳಲು ಯಶಸ್ವಿಯಾದರೂ, ಚಾಲಕ ಖಾಸಿಂ ಸ್ಥಳದಲ್ಲೇ ಮೃತಪಟ್ಟರು.
ಮೃತ ವ್ಯಕ್ತಿಯ ಹಿನ್ನೆಲೆ: ಶಿಡ್ಲಘಟ್ಟ ಮೂಲದ ಖಾಸಿಂ ತಮ್ಮ ಕುಟುಂಬ ಸಮೇತ ಹೆಗ್ಡೆ ನಗರದಲ್ಲಿ ವಾಸಿಸುತ್ತಿದ್ದರು. ನೈಟ್ ಶಿಫ್ಟ್ ನಲ್ಲಿ ಆಟೋ ಓಡಿಸುತ್ತಿದ್ದ ಅವರು ಇತ್ತೀಚೆಗೆ ಹೊಸ ಆಟೋ ಖರೀದಿ ಮಾಡಿದ್ದು, ಇಎಂಐ ಪಾವತಿಸಲು ನಿರಂತರ ದುಡಿಯುತ್ತಿದ್ದರು. ಅವರ ಪತ್ನಿಗೆ ಹೃದಯ ಸಮಸ್ಯೆ ಇರುವುದರಿಂದ ಸಂಪೂರ್ಣ ಕುಟುಂಬ ಖಾಸಿಂ ಮೇಲೆ ಅವಲಂಬಿತವಾಗಿತ್ತು.
ಸ್ಥಳೀಯರ ಆಕ್ರೋಶ: ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಮೃತ ಖಾಸಿಂ ಕುಟುಂಬಸ್ಥರು BMRCL ಮತ್ತು ಕಾಮಗಾರಿ ಗುತ್ತಿಗೆ ಪಡೆದ NCC ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೈಡಕ್ಟ್ ಸಾಗಿಸುವಾಗ ಸುರಕ್ಷತಾ ಕ್ರಮಗಳಿಲ್ಲದಿದ್ದರೂ, ಲಾರಿ ಓರ್ವೇಯಿನಲ್ಲಿ ಚಲಿಸಿದ್ದುದಾಗಿ ಅವರು ಆರೋಪಿಸಿದರು. “ಇಷ್ಟು ದೊಡ್ಡ ವೈಡಕ್ಟ್ ಬ್ರೇಕ್ ಆಗಿದ್ದು ಹೇಗೆ? ಇದು ಪಿಲ್ಲರ್ ಮೇಲೆ ಇತ್ತಿದ್ದರೆ ಏನಾಗುತ್ತಿತ್ತು?” ಎಂದು ಸ್ಥಳೀಯ ನಿವಾಸಿ ನಾರಾಯಣ್ ಪ್ರಶ್ನಿಸಿದರು.
ಕುಟುಂಬದ ಆಕ್ರಂದನ: ಮೃತ ಖಾಸಿಂ ಪುತ್ರ ಮೊಹಮ್ಮದ್ ಆಸೀಫ್ ಭಾವುಕರಾಗಿ ಹೇಳಿದರು, “ಅವರಿಗೆ ತುಂಬಾ ಸಾಲ ಇತ್ತು. ನಿನ್ನೆ ರಾತ್ರಿ ಅವರು ಕಾಲ್ ಮಾಡಿದ್ದರು. ಬೆಳಿಗ್ಗೆ ಬರುತ್ತೀನಿ ಅಂತ ಹೇಳಿದರು. ಈಗ ಅವರು ಇಲ್ಲ ಅಂತಿದ್ದಾರೆ… ಸೇಫ್ಟಿ ಇತ್ತಿದ್ದರೆ ನನ್ನ ಅಪ್ಪ ಬದುಕುಳಿದಿರ್ತಿದ್ದರು.”
ಅಧಿಕೃತ ಕ್ರಮ: ಯಲಹಂಕ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. BMRCL ಹಾಗೂ NCC ಕಂಪನಿಗೆ ನೋಟಿಸ್ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ನಡುವೆ ಸಾರ್ವಜನಿಕರು ಇಂದು ಬೆಳಗ್ಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.