ಕೃಷ್ಣ ಬೈರೇಗೌಡರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನರದ್ದು ಖಾಸಗಿ ಬೇಡಿಕೆ
ಬೆಂಗಳೂರು: ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಬಿಜೆಪಿ ಶಾಸಕ ಮುನಿರತ್ನ ಅವರು ಹಣ ನೀಡಿದರೆ, ಆ ನಿಲ್ದಾಣಕ್ಕೆ ‘ಮುನಿರತ್ನ ಅಂಡ್ ಕಂಪನಿ’ ಎಂದು ಹೆಸರಿಡಲು ಸಿದ್ಧ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಕುಟುಕಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮುನಿರತ್ನ ಅವರು, ಎಂಬೆಸಿ ಸಂಸ್ಥೆಯಿಂದ ಹಣ ಬಂದಿಲ್ಲ ಎಂಬ ಕಾರಣಕ್ಕೆ ಬೆಟ್ಟದಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣವನ್ನು ಕೈಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವಕುಮಾರ್, “ಬೆಂಗಳೂರಿನಲ್ಲಿ ಸಿಎಸ್ಆರ್ ನಿಧಿಯ ಮೂಲಕ ಮೆಟ್ರೋ ನಿಲ್ದಾಣ ನಿರ್ಮಿಸಿದರೆ, ಆ ಸಂಸ್ಥೆಯ ಹೆಸರನ್ನು ನಿಲ್ದಾಣಕ್ಕೆ ಇಡುವ ಕಲ್ಪನೆ ಇದೆ. ಈ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಶ್ಲಾಘಿಸಿದ್ದಾರೆ. ಇನ್ಫೋಸಿಸ್ ರೂ.200 ಕೋಟಿ ನೀಡಿ ಒಂದು ನಿಲ್ದಾಣಕ್ಕೆ ತಮ್ಮ ಹೆಸರು ಪಡೆದಿದೆ. ಡೆಲ್ಟಾ ಸಂಸ್ಥೆಯೂ ಹಣ ನೀಡಿದೆ. ಆದರೆ, ಮುನಿರತ್ನ ಅವರಿಗೆ ಆ ಪ್ರದೇಶದಲ್ಲಿ 70-80 ಎಕರೆ ಜಮೀನಿದೆ. ಅವರ ಜಮೀನಿನ ಸಮೀಪದಲ್ಲಿ ಮೆಟ್ರೋ ನಿಲ್ದಾಣ ಬೇಕೆಂಬ ಖಾಸಗಿ ಬೇಡಿಕೆಯಿಂದ ಈ ಪ್ರಶ್ನೆ ಕೇಳಿದ್ದಾರೆ,” ಎಂದು ಲೇವಡಿ ಮಾಡಿದರು.
ಪ್ರತಿಕ್ರಿಯೆಯಾಗಿ ಮಾತನಾಡಿದ ಮುನಿರತ್ನ, “ಡಿಸಿಎಂ ಶಿವಕುಮಾರ್ ಅವರು ಎಂಬೆಸಿ ಬಿಲ್ಡರ್‌ಗೆ ಕರೆ ಮಾಡಿ 24 ಗಂಟೆಯೊಳಗೆ ಹಣ ಕಟ್ಟುವಂತೆ ಹೇಳಿದರೆ ಸಾಕು. ಬೆಂಗಳೂರಿನ ಬಿಲ್ಡರ್‌ಗಳು ಕೇವಲ ಶಿವಕುಮಾರ್ ಅವರ ಮಾತನ್ನೇ ಕೇಳುತ್ತಾರೆ,” ಎಂದು ತಿರುಗೇಟು ನೀಡಿದರು.
ಇದಕ್ಕೆ ಶಿವಕುಮಾರ್, “ಮನುಷ್ಯನಿಗೆ ಸ್ವಾರ್ಥ ಇರುವುದು ಸಹಜ. ಎಂಬೆಸಿ ಸಂಸ್ಥೆಯವರು ಆ ಭಾಗದಲ್ಲಿ 250 ಎಕರೆ ಜಮೀನು ಹೊಂದಿದ್ದಾರೆ. ರೂ.140 ಕೋಟಿ ಮೌಲ್ಯದ ಮೆಟ್ರೋ ನಿಲ್ದಾಣಕ್ಕೆ ರೂ.120 ಕೋಟಿ ನೀಡುವ ಒಪ್ಪಂದವಾಗಿತ್ತು. ಆದರೆ, ಅವರು ಕೇವಲ ರೂ.1 ಕೋಟಿ ಮಾತ್ರ ನೀಡಿದ್ದಾರೆ. ಮುನಿರತ್ನ ಅವರಿಗೆ ಸೇರಿದ 70-80 ಎಕರೆ ಜಮೀನಿನ ಪಕ್ಕದಲ್ಲಿ ಮೆಟ್ರೋ ನಿಲ್ದಾಣ ಬೇಕೆಂಬ ಖಾಸಗಿ ಆಸಕ್ತಿಯಿಂದ ಮುನಿರತ್ನ ಈ ಪ್ರಶ್ನೆ ಕೇಳಿದ್ದಾರೆ. ಅವರು ಹಣ ಕೊಟ್ಟರೆ, ‘ಮುನಿರತ್ನ ಅಂಡ್ ಕಂಪನಿ’ ಎಂದು ನಿಲ್ದಾಣಕ್ಕೆ ಹೆಸರಿಡಲು ಸಿದ್ಧ,” ಎಂದು ಕಿಚಾಯಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, “ಎಂಬೆಸಿಯೊಂದಿಗೆ ಒಪ್ಪಂದವಾಗಿದೆ. ಅವರು ರೂ.1 ಕೋಟಿ ನೀಡಿದ್ದಾರೆ. ಬಾಕಿ ರೂ.119 ಕೋಟಿಗೆ ಶಿವಕುಮಾರ್ ಧಮ್ಕಿ ಹಾಕಲಿ,” ಎಂದು ತಮಾಷೆಯಾಗಿ ಹೇಳಿದರು. ಇದಕ್ಕೆ ಶಿವಕುಮಾರ್, “ಧಮ್ಕಿ ಯಾಕೆ? ಬೇಕಾದರೆ ಒಪ್ಪಂದ ರದ್ದುಗೊಳಿಸಿ, ಮುನಿರತ್ನ ರೂ.120 ಕೋಟಿ ಕೊಟ್ಟರೆ ‘ಮುನಿರತ್ನ ಅಂಡ್ ಕಂಪನಿ’ ಎಂದು ಹೆಸರಿಡೋಣ,” ಎಂದು ತಿರುಗೇಟು ನೀಡಿದರು.
“ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರು ಈ ವಿಷಯವನ್ನು ಚರ್ಚಿಸಿ, ಕ್ಷೇತ್ರದ ಸಾರ್ವಜನಿಕ ಹಿತಾಸಕ್ತಿಯ ಬೇಡಿಕೆಯನ್ನ ಮಂಡಿಸಿದ್ದಾರೆ. ಆದರೆ ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇದೇ ವ್ಯತ್ಯಾಸ,” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಅಶ್ವತ್ಥ್ ನಾರಾಯಣ ಸಲಹೆಗೆ ಸ್ವಾಗತ
ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರು, ಬೆಂಗಳೂರಿನ ಚರಂಡಿ ವ್ಯವಸ್ಥೆಯ ಕೊರತೆಯಿಂದ ಮಳೆಗಾಲದಲ್ಲಿ ಅಂಡರ್‌ಪಾಸ್ ಸೇರಿದಂತೆ ಎಲ್ಲೆಡೆ ನೀರು ನಿಲ್ಲುವ ಸಮಸ್ಯೆ ಇದೆ ಎಂದು ಗಮನ ಸೆಳೆದರು. ಕಾಲುವೆಗಳ ಮೂಲಕ ಮಳೆನೀರನ್ನು ಇಂಗು ಬಾವಿಗಳಿಗೆ ಸಂಗ್ರಹಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಶಿವಕುಮಾರ್, “ಅಶ್ವತ್ಥ್ ನಾರಾಯಣ ಹಿರಿಯ ಶಾಸಕರು, ಅವರ ಸಲಹೆಯನ್ನು ಸ್ವಾಗತಿಸುತ್ತೇವೆ. 2,395 ಕಡೆ ಮಳೆನೀರು ಗಾಲುವೆ ಒತ್ತುವರಿಯನ್ನು ತೆರವುಗೊಳಿಸಿದ್ದೇವೆ. ಅಂತರ್ಜಲ ಮರುಪೂರಣಕ್ಕೆ ನೀತಿ ರೂಪಿಸಲಾಗುತ್ತಿದೆ. ಈ ವಿಷಯದಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು,” ಎಂದು ಭರವಸೆ ನೀಡಿದರು.