ಜನರ ಸೇವೆಯೇ ಮುಖ್ಯ, ಕ್ರೆಡಿಟ್ ರಾಜಕಾರಣವಲ್ಲ
ಗಲಾಟೆ ಮಾಡುವ ಸಂಸದರು ಅನುದಾನ ಕೊಡಿಸಲಿ
ಆ.10ರಂದು ಪ್ರಧಾನಿಗಳಿಂದ ಹಳದಿ ಮಾರ್ಗ ಉದ್ಘಾಟನೆ
ಬೆಂಗಳೂರು :ಮೆಟ್ರೋ ಯೋಜನೆಯು ಕೇವಲ ಕೇಂದ್ರ ಸರ್ಕಾರದ ಯೋಜನೆಯಲ್ಲ, ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಶೇ.50-50ರ ಪಾಲುದಾರಿಕೆ ಇದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. “ಇದರಲ್ಲಿ ಜನರ ಸೇವೆಯೇ ಮುಖ್ಯವಾಗಿದೆ, ಕ್ರೆಡಿಟ್ ರಾಜಕಾರಣವಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳವಾರ ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ ಶಿವಕುಮಾರ್, ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು 7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 19.15 ಕಿಮೀ ಉದ್ದದ, 16 ನಿಲ್ದಾಣಗಳಿರುವ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
“ಇದು ನಮ್ಮ ಮೆಟ್ರೋ. ಮುಖ್ಯಮಂತ್ರಿಗಳು ಮತ್ತು ನಾನು ಪ್ರಧಾನಿಗಳ ಬಳಿ ಉದ್ಘಾಟನೆಗೆ ಮನವಿ ಮಾಡಿದ್ದೆವು. ಈಗ ಅವರು ಸಮಯ ನೀಡಿದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಪಾಲುದಾರಿಕೆ ಇದೆ. ಕೇಂದ್ರದಿಂದ ಅಧ್ಯಕ್ಷರಿದ್ದರೆ, ರಾಜ್ಯದಿಂದ ವ್ಯವಸ್ಥಾಪಕ ನಿರ್ದೇಶಕರು ಇದ್ದಾರೆ. ಯಾರಿಗೂ ಇಲ್ಲಿ ವಿಶೇಷ ಗೌರವವಿಲ್ಲ, ಜನರ ಸೇವೆಯೇ ನಮ್ಮ ಗುರಿ” ಎಂದು ಶಿವಕುಮಾರ್ ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ವಿವರ
ಆಗಸ್ಟ್ 10ರಂದು ಐಐಎಂಬಿಯ ಸಭಾಂಗಣದಲ್ಲಿ ಸರಳ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸ್ಥಳೀಯ ಶಾಸಕರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಈ ವೇಳೆ ಡಬಲ್ ಡೆಕ್ಕರ್ ಯೋಜನೆಗೆ ಭೂಸ್ವಾಧೀನಕ್ಕೆ ಅಗತ್ಯವಿರುವ ಅನುದಾನದ ಕೊರತೆ ಬಗ್ಗೆ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಸಂಸದರಿಗೆ ಟಾಂಗ್: ಅನುದಾನ ಕೊಡಿಸಿ
ಮೆಟ್ರೋ ಮಾರ್ಗ ವಿಸ್ತರಣೆ ಮತ್ತು ಡಬಲ್ ಡೆಕ್ಕರ್ ಯೋಜನೆ ಬಗ್ಗೆ ಮಾತನಾಡಿದ ಅವರು, “ಗಲಾಟೆ ಮಾಡುವ ಸಂಸದರು ಅನುದಾನ ಕೊಡಿಸಿದರೆ ಬೆಂಗಳೂರಿಗೆ ಒಳ್ಳೆಯದು. ಯಾರೂ ಅನುದಾನದ ಬಗ್ಗೆ ಮಾತನಾಡುವುದಿಲ್ಲ, ಕೇವಲ ತಪ್ಪುಗಳನ್ನು ಕಂಡುಹಿಡಿದು ಗಲಾಟೆ ಮಾಡುತ್ತಾರೆ” ಎಂದು ಬಿಜೆಪಿ ಸಂಸದರಿಗೆ ತಿರುಗೇಟು ನೀಡಿದರು.
ಮುಂದಿನ ದಿನಗಳಲ್ಲಿ ಮೆಟ್ರೋ ಮಾರ್ಗ ನಿರ್ಮಾಣದೊಂದಿಗೆ ಡಬಲ್ ಡೆಕ್ಕರ್ ನಿರ್ಮಾಣಕ್ಕೂ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಕಟ್ಟಡಗಳನ್ನು ಕೆಡವಿದರೆ ಹೆಚ್ಚಿನ ಪರಿಹಾರ ನೀಡಬೇಕಾಗುತ್ತದೆ ಎಂದು ತಿಳಿಸಿದ ಅವರು, ಈ ಕಾರ್ಯವನ್ನು ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಸಹಕಾರದೊಂದಿಗೆ ಮಾಡಲಾಗುವುದು ಎಂದರು.
ಸುರಕ್ಷತೆಗೆ ಆದ್ಯತೆ, ಆತುರದ ಮಾತಿಗೆ ಕಿವಿಗೊಡೆವುದಿಲ್ಲ
ಕಮಿಷನರೇಟ್ ಆಫ್ ಮೆಟ್ರೋ ರೈಲ್ವೇ ಸೇಫ್ಟಿಯಿಂದ ಜುಲೈ 31ರಂದು ಹಳದಿ ಮಾರ್ಗಕ್ಕೆ ಸುರಕ್ಷತಾ ಪ್ರಮಾಣಪತ್ರ ದೊರೆತಿದೆ. ಈ ಬಗ್ಗೆ ಟೀಕಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಟಾಂಗ್ ನೀಡಿದ ಶಿವಕುಮಾರ್, “ತೇಜಸ್ವಿ ಸೂರ್ಯ ಆತುರದಲ್ಲಿರುವ ಹುಡುಗ, ಅನುಭವವಿಲ್ಲ. ಈ ಕೆಲಸಗಳನ್ನು ಆತುರದಲ್ಲಿ ಮಾಡಲಾಗದು” ಎಂದರು.

ರೈಲು ಸಂಚಾರ ವೇಳಾಪಟ್ಟಿ
ಪ್ರಸ್ತುತ ಮೂರು ರೈಲುಗಳು ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಗೆ ಸಿದ್ಧವಿವೆ. ನಾಲ್ಕನೇ ರೈಲು ಆಗಸ್ಟ್‌ನಲ್ಲಿ ಬರಲಿದ್ದು, ಕಾರ್ಯಾಚರಣೆಗೆ ಒಂದು ವಾರ ಬೇಕಾಗುತ್ತದೆ. ಈಗ 25 ನಿಮಿಷಗಳಿಗೊಮ್ಮೆ ರೈಲು ಸಂಚಾರವಿದ್ದು, ಮುಂದೆ ರೈಲುಗಳ ಸಂಖ್ಯೆ ಹೆಚ್ಚಿದಂತೆ 20, ತದನಂತರ 10 ನಿಮಿಷಗಳಿಗೊಮ್ಮೆ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
“ಈ ಮಾರ್ಗವು ಮಹದೇವಪುರ ಸೇರಿದಂತೆ ಐಟಿ ವಲಯಕ್ಕೆ ಸಂಪರ್ಕ ಕೊಂಡಿಯಾಗಲಿದೆ. ನಗರದ ಯಾವುದೇ ಭಾಗದಿಂದ ದಟ್ಟಣೆ ಇಲ್ಲದೆ ಇಲ್ಲಿಗೆ ಬರಬಹುದು” ಎಂದು ಶಿವಕುಮಾರ್ ತಿಳಿಸಿದರು.
ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ
ಹೆಬ್ಬಾಳ ಜಂಕ್ಷನ್‌ನ ಮೇಲ್ಸೇತುವೆಯನ್ನು ಆಗಸ್ಟ್ 15ರ ಒಳಗೆ ಮುಖ್ಯಮಂತ್ರಿಗಳ ದಿನಾಂಕ ಪಡೆದು ಉದ್ಘಾಟಿಸಲಾಗುವುದು. ಈಗ ಕೆ.ಆರ್.ಪುರಂನಿಂದ ಮೇಖ್ರಿ ವೃತ್ತದ ಕಡೆಗೆ ಮಾತ್ರ ಲೋಕಾರ್ಪಣೆಯಾಗಲಿದ್ದು, ಇನ್ನೊಂದು ಭಾಗದ ಮೇಲ್ಸೇತುವೆಯನ್ನು ನಂತರ ಪೂರ್ಣಗೊಳಿಸಲಾಗುವುದು. ಹೆಬ್ಬಾಳ-ನಾಗಾವರ ಕಡೆ ಎಸ್ಟೀಮ್ ಮಾಲ್‌ನಿಂದ ವಿಶ್ವವಿದ್ಯಾಲಯದವರೆಗೆ 1.5 ಕಿಮೀ ಉದ್ದದ ಹೊಸ ಟನಲ್ ರಸ್ತೆ ನಿರ್ಮಾಣಕ್ಕೆ ಸಂಚಿವ ಸಂಪುಟದಲ್ಲಿ ಶೀಘ್ರದಲ್ಲೇ ಚರ್ಚಿಸಲಾಗುವುದು ಎಂದರು.

ರೈಲು ಕೊರತೆ ಬಗ್ಗೆ ಸ್ಪಷ್ಟನೆ
ಪ್ರಯಾಣಿಕರ ಸಂಖ್ಯೆ ಹೆಚ್ಚಿದರೂ ಕೇವಲ ಮೂರು ರೈಲುಗಳಿರುವ ಬಗ್ಗೆ ಕೇಳಿದಾಗ, “ಕೆಲವು ಕಾರಣಾಂತರಗಳಿಂದ ರೈಲುಗಳ ತಡವಾಗಿದೆ. ಚೀನಾದಿಂದ ತರಲಾಗಿದ್ದ ರೈಲುಗಳಲ್ಲಿ ಕೆಲವು ತೊಡಕುಗಳಿವೆ. ಇಟಾನಗರ ಮತ್ತು ಇತರೆಡೆಯಿಂದ ರೈಲುಗಳು ಬಂದ ನಂತರ ಸಂಚಾರ ವೇಗವನ್ನು ಹೆಚ್ಚಿಸಲಾಗುವುದು” ಎಂದರು.
ಅಭಿನಂದನೆ ಮತ್ತು ಟನಲ್ ರಸ್ತೆ ಟೆಂಡರ್
ಹಳದಿ ಮಾರ್ಗದ ಸಂಪೂರ್ಣಗೊಳಿಕೆಗೆ ಶ್ರಮಿಸಿದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಕಾರ್ಮಿಕರನ್ನು ರಾಜ್ಯ ಸರ್ಕಾರದ ವತಿಯಿಂದ ಶಿವಕುಮಾರ್ ಅಭಿನಂದಿಸಿದರು. ಟನಲ್ ರಸ್ತೆ ಟೆಂಡರ್‌ನಲ್ಲಿ ಅದಾನಿ ಕಂಪೆನಿ ಭಾಗವಹಿಸುವ ಬಗ್ಗೆ ಕೇಳಿದಾಗ, “ನೀವೂ ಭಾಗವಹಿಸಿ” ಎಂದು ಹಾಸ್ಯದಿಂದ ಉತ್ತರಿಸಿದರು.
ಸಂಚಾರ ದಟ್ಟಣೆ ಮತ್ತು ರಸ್ತೆ ಡಾಂಬರೀಕರಣ
ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಕೇಳಿದಾಗ, “ದೇಶದ ಎಲ್ಲಾ ಭಾಗದಿಂದ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಒಳ್ಳೆಯ ವಾತಾವರಣ, ಕಾವೇರಿ ನೀರು, ಉತ್ತಮ ಸಂಸ್ಥೆಗಳಿಂದಾಗಿ ಯಾರೂ ಇಲ್ಲಿಂದ ಹೊರಗೆ ಹೋಗುವುದಿಲ್ಲ. ಮೆಟ್ರೋ ನಿಲ್ದಾಣಗಳ ಬಳಿ 3-4 ಎಕರೆ ಜಾಗವನ್ನು ವಾಹನ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಕೆಳಗೆ ನಿಲ್ದಾಣ ಮತ್ತು ಮೇಲೆ ವಾಣಿಜ್ಯ ಉದ್ದೇಶಕ್ಕೆ ಜಾಗ ಬಳಕೆಯಾಗಲಿ” ಎಂದರು.
ರಸ್ತೆ ಡಾಂಬರೀಕರಣದ ಬಗ್ಗೆ, “ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಮಾಡಿದರೂ ಸಾಲದು. ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವೆ. ಅಧಿಕಾರಿಗಳಿಗೆ ಗಡುವು ನೀಡಲಾಗಿದೆ” ಎಂದರು.
ಫೀಡರ್ ಬಸ್‌ಗಳ ಕಾರ್ಯನಿರ್ವಹಣೆ
ಮೆಟ್ರೋ ಫೀಡರ್ ಬಸ್‌ಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಕೇಳಿದಾಗ, “ಈ ವಿಷಯಕ್ಕೆ ಗಮನ ಹರಿಸುವೆ” ಎಂದು ಶಿವಕುಮಾರ್ ಭರವಸೆ ನೀಡಿದರು.