ರಕ್ಷಣೆ, ಬಾಹ್ಯಾಕಾಶದಲ್ಲಿ ಸ್ಥಳೀಯ ತಂತ್ರಜ್ಞಾನದ ಮಹತ್ವ
ಬೆಂಗಳೂರು: ಅಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಕರ್ನಾಟಕ ಮಾಧ್ಯಮ ಪ್ರವಾಸದಲ್ಲಿ ಭಾಗವಹಿಸುತ್ತಿರುವ ಮೇಘಾಲಯ ಮತ್ತು ತ್ರಿಪುರಾದ ೧೪ ಮಂದಿ ಪತ್ರಕರ್ತರ ನಿಯೋಗವು ಇಂದು ಬೆಂಗಳೂರಿನ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿಭಾಗಕ್ಕೆ (ಇಎಸ್‌ಡಿ) ಭೇಟಿ ನೀಡಿತು. ಈ ಭೇಟಿಯಲ್ಲಿ ವಿಭಾಗದ ತಾಂತ್ರಿಕ ಸಾಮರ್ಥ್ಯಗಳು, ಕಾರ್ಯತಾಂತ್ರಿಕ ಕೊಡುಗೆಗಳು ಮತ್ತು ರಕ್ಷಣೆ, ವಿದ್ಯುತ್, ಬಾಹ್ಯಾಕಾಶದಂತಹ ರಾಷ್ಟ್ರೀಯ ವಲಯಗಳಲ್ಲಿ ಭವಿಷ್ಯ-ಆಧಾರಿತ ಉಪಕ್ರಮಗಳ ಬಗ್ಗೆ ವಿವರವಾದ ಅವಲೋಕನ ನೀಡಲಾಯಿತು.

ಭಾರತ ಸರ್ಕಾರದ ಭಾರೀ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಿಎಚ್‌ಇಎಲ್, ದೇಶದ ಅತಿದೊಡ್ಡ ಉದ್ಯಮಗಳಲ್ಲಿ ಒಂದು. ಇಂಧನ, ಸಾರಿಗೆ, ರಕ್ಷಣೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ತೊಡಗಿರುವ ಈ ಸಂಸ್ಥೆ, ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಇತರ ಕೈಗಾರಿಕೆಗಳಿಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.
ನಿಯೋಗವನ್ನು ಸ್ವಾಗತಿಸಿದ ಇಎಸ್‌ಡಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅನ್ಬಳಗನ್, ವಿಭಾಗದ ಕಾರ್ಯವೈಖರಿಯನ್ನು ವಿವರಿಸಿ, ರಕ್ಷಣೆ, ವಿದ್ಯುತ್, ಬಾಹ್ಯಾಕಾಶ ಮತ್ತು ಕೈಗಾರಿಕಾ ಅಪ್ಲಿಕೇಷನ್‌ಗಳಿಗೆ ಸುಧಾರಿತ ಎಲೆಕ್ಟ್ರಾನಿಕ್ಸ್ ಪರಿಹಾರಗಳ ಪೂರೈಕೆಯಲ್ಲಿ ಇಎಸ್‌ಡಿಯ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ಸೌರಶಕ್ತಿ ವ್ಯವಸ್ಥೆಗಳ ಅಭಿವೃದ್ಧಿ ಮೂಲಕ ಇಂಧನ ಪರಿವರ್ತನೆಯಲ್ಲಿ ಬಿಎಚ್‌ಇಎಲ್‌ನ ಬೆಳೆಯುತ್ತಿರುವ ಪಾತ್ರ, ಉಷ್ಣ ವಿದ್ಯುತ್ ಕೇಂದ್ರಗಳಿಗೆ ನಿಯಂತ್ರಣ ವ್ಯವಸ್ಥೆಗಳು ಮತ್ತು ಯಾಂತ್ರೀಕೃತ ತಂತ್ರಜ್ಞಾನಗಳ ಪೂರೈಕೆಯ ಮೂಲಕ ನಿರಂತರ ಬೆಂಬಲವನ್ನು ಅವರು ಪ್ರಮುಖವಾಗಿ ಚರ್ಚಿಸಿದರು.

ಐಎನ್‌ಎಸ್ ವಿಕ್ರಾಂತ್‌ನಲ್ಲಿ ಬಿಎಚ್‌ಇಎಲ್ ಕೊಡುಗೆ: ರಾಷ್ಟ್ರೀಯ ಸ್ವಾವಲಂಬನೆಗೆ ಮೈಲುಗಲ್ಲು
ನಿಯೋಗದೊಂದಿಗಿನ ಸಂವಾದದಲ್ಲಿ ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ಬಿಎಚ್‌ಇಎಲ್‌ನ ಕೊಡುಗೆಯನ್ನು ಹೈಲೈಟ್ ಮಾಡಲಾಯಿತು. ಇಎಸ್‌ಡಿ ವಿಭಾಗವು ಹಡಗಿಗೆ ಪ್ರಮುಖ ನಿಯಂತ್ರಣ ಮತ್ತು ಸಲಕರಣೆ ವ್ಯವಸ್ಥೆಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಇದು ರಾಷ್ಟ್ರೀಯ ರಕ್ಷಣೆ ಮತ್ತು ಸ್ವಾವಲಂಬನೆಗೆ ಸಂಸ್ಥೆಯ ಬದ್ಧತೆಯನ್ನು ಸೂಚಿಸುವ ಮೈಲಿಗಲ್ಲಾಗಿದೆ.
ಪತ್ರಕರ್ತರನ್ನು ಉತ್ಪಾದನಾ ಸೌಲಭ್ಯಗಳು, ಸಂಶೋಧನಾ-ಅಭಿವೃದ್ಧಿ ಕೇಂದ್ರಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳ ಪ್ರವಾಸಕ್ಕೆ ಕೊಂಡೊಯ್ಯಲಾಯಿತು. ಇಲ್ಲಿ ಬಿಎಚ್‌ಇಎಲ್‌ನ ಎಂಜಿನಿಯರಿಂಗ್ ಶ್ರೇಷ್ಠತೆ, ಸುಧಾರಿತ ಮೂಲಸೌಕರಿ ಮತ್ತು ಕಠಿಣ ಗುಣಮಟ್ಟದ ಪ್ರಕ್ರಿಯೆಗಳನ್ನು ಅವರು ನೇರವಾಗಿ ವೀಕ್ಷಿಸಿದರು. ಈ ಭೇಟಿ ರಕ್ಷಣಾ ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ದರ್ಜೆಯ ವ್ಯವಸ್ಥೆಗಳು, ಸಾರಿಗೆ ಮತ್ತು ಕೈಗಾರಿಕಾ ಯಾಂತ್ರೀಕರಣದಲ್ಲಿ ವಿಭಾಗದ ಸಾಮರ್ಥ್ಯಗಳನ್ನು ಬೆಳಕು ಚೆಲ್ಲಿತು. ಅಲ್ಲದೆ, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಉಪಕ್ರಮಗಳೊಂದಿಗೆ ವಿಭಾಗದ ಹೊಂದಾಣಿಕೆಯ ಬಗ್ಗೆ ಒಳನೋಟ ನೀಡಿತು.

ಆಕರ್ಷಕ ಪ್ರಶ್ನೋತ್ತರ: ಭವಿಷ್ಯ ಯೋಜನೆಗಳು ಮತ್ತು ನಾವೀನ್ಯತೆ
ನಿಯೋಗದ ಮುಖ್ಯಸ್ಥರೊಂದಿಗಿನ ಸಂವಾದವು ಆಕರ್ಷಕ ಪ್ರಶ್ನೋತ್ತರ ಗೋಷ್ಠಿಯೊಂದಿಗೆ ಸಮಾಪ್ತವಾಯಿತು. ಹಿರಿಯ ಬಿಎಚ್‌ಇಎಲ್ ಅಧಿಕಾರಿಗಳು ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿ, ಮುಂಬರುವ ಯೋಜನೆಗಳು, ಡಿಜಿಟಲ್ ಪರಿವರ್ತನೆ, ಸುಸ್ಥಿರತೆ ಮತ್ತು ನಾವೀನ್ಯತೆಯ ನಿಟ್ಟಿನಲ್ಲಿ ಕಂಪನಿಯ ನೀಲನಕ್ಷತೆಯ ದೂರದೃಷ್ಟಿಯನ್ನು ಹಂಚಿಕೊಂಡರು.
ಭೇಟಿಯ ನಂತರ, ಪತ್ರಕರ್ತರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಇಸ್ರೋ) ಭೇಟಿ ನೀಡಿ, ಸೂಪರ್ ಕಂಪ್ಯೂಟರ್‌ನ ಕಾರ್ಯವೈಖರಿ, ಸಂಸ್ಥೆಯ ಚಟುವಟಿಕೆಗಳು ಮತ್ತು ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಭೇಟಿಗಳು ಭಾರತದ ತಂತ್ರಜ್ಞಾನ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾ, ರಾಷ್ಟ್ರೀಯ ಸ್ವಾವಲಂಬನೆಯ ಗುರಿಗಳನ್ನು ಬಲಪಡಿಸುವಲ್ಲಿ ಮಹತ್ವದ್ದಾಗಿವೆ. (ಪಿಐಬಿ ಬೆಂಗಳೂರು)