ಬೆಂಗಳೂರು, ದೇಶದಲ್ಲಿ ಅತಿಯಾದ ಮೈದಾ ಹಿಟ್ಟು ಹಾಗೂ ಸಕ್ಕರೆ ಬಳಕೆಯಿಂದ ಶೇಕಡಾ 13.85 ಜನರಲ್ಲಿ ಸ್ಥೂಲಕಾಯ, ಶೇಕಡಾ 8.3 ರಷ್ಟು ಜನರಿಗೆ ಸಕ್ಕರೆ ಕಾಯಿಲೆ ಹಾಗೂ ಶೇಕಡಾ 7.4 ರಷ್ಟು ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರÀುತ್ತಿವೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮೈದಾ ಹಾಗೂ ಸಕ್ಕರೆ ಮುಕ್ತ ಬೇಕರಿ ಪದಾರ್ಥಗಳನ್ನು ತಯಾರಿಸಲು ಸಂಶೋಧನೆಗಳನ್ನು ಕೈಗೊಳ್ಳುತ್ತಿದೆ, ಬೇಕರಿ ಉತ್ಪನ್ನಗಳಲ್ಲಿ ಸಕ್ಕರೆಯ ಬದಲಿಗೆ ಜೇನುತುಪ್ಪವನ್ನು ಬಳಸುವಂತಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ತಿಳಿಸಿದರು.
ಇಂದು ಕೃಷಿ ವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ. ಆವರಣದಲ್ಲಿ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯಿಂದ 14 ವಾರದ ಬೇಕರಿ ತಂತ್ರಜ್ಞಾನ ಕುರಿತು ಸರ್ಟಿಫಿಕೇಟ್ ಕೋರ್ಸ್‍ನ ಪದವಿ ಪಡೆದ ಶಿಭಿರಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಬೇಕರಿ ಆಧಾರಿತ ನವೀನ ಉತ್ಪನ್ನಗಳ ತಯಾರಿಕೆ, ಕೇಕ್ ತಯಾರಿಕೆ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸಿರಿಧಾನ್ಯಗಳಿಂದ ತಯಾರಿಸಬಹುದಾದ ಬೇಕರಿ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಅದರಲ್ಲೂ ಮಹಿಳೆ ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ಪೌಷ್ಠಿಕ ಲಡ್ಡನ್ನು ತಯಾರು ಮಾಡಲಾಗಿದೆ. ಬೇಕರಿ ಪದಾರ್ಥಗಳು ನಮ್ಮ ದೈನಂದಿನ ಬದುಕಿನಲ್ಲಿ ಉಪಯೋಗಿಸುವ ಪದಾರ್ಥಗಳಲ್ಲಿ ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಮುಖ್ಯ ಉದಾಹರಣೆಯೆಂದರೆ ಮೆಡಿಕಲ್ ಸ್ಟೋರ್ ಹಾಗೂ ಬೇಕರಿಯಲ್ಲಿ ಮಾತ್ರ ನಾವು ಯಾವುದೇ ಚೌಕಾಸಿ ಮಾಡದೆ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿದ್ದೇವೆ ಎಂದರು.