ಮೈಸೂರು: ದೃಷ್ಟಿ ವಿಶೇಷ ಚೇತನರಿಗೆ ಸಾರ್ವಜನಿಕ ಬಸ್ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ, ಭಾರತ ಮತ್ತು ಜರ್ಮನಿ ಸರ್ಕಾರಗಳ ನಡುವಿನ ಅರ್ಬನ್ ಮೊಬಿಲಿಟಿ ಸಹಭಾಗಿತ್ವದಡಿ, GIZ ಕಂಪನಿಯ ಆರ್ಥಿಕ ನೆರವಿನೊಂದಿಗೆ, ಮೈಸೂರು ನಗರ ಬಸ್ ನಿಲ್ದಾಣದಲ್ಲಿ ‘ಧ್ವನಿ ಸ್ಪಂದನ’ ಯೋಜನೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗರೆಡ್ಡಿ ರವರು ಇಂದು ಚಾಲನೆ ನೀಡಿದರು.
ರೇಸ್ಡ್ ಲೈನ್ಸ್ ಫೌಂಡೇಶನ್ ಮತ್ತು ಐಐಟಿ ದೆಹಲಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ನವೀನ ಉಪಕರಣವು ದೃಷ್ಟಿ ವಿಶೇಷ ಚೇತನ ವ್ಯಕ್ತಿಗಳಿಗೆ ಸಾರ್ವಜನಿಕ ಬಸ್‌ಗಳಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಸಹಾಯಕವಾಗಿದೆ. ಈ ಯೋಜನೆಯಡಿ, ಮೈಸೂರಿನ 200 ಬಸ್‌ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ದೃಷ್ಟಿ ವಿಶೇಷ ಚೇತನರು ತಮಗೆ ಬೇಕಾದ ಬಸ್ ಮಾರ್ಗವನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ.

ಧ್ವನಿ ಸ್ಪಂದನ ಯೋಜನೆಯ ವಿಶೇಷತೆಗಳು
ಈ ಉಪಕರಣವು ಬಸ್‌ನಲ್ಲಿ ಸ್ಪೀಕರ್ ಮತ್ತು ರಿಮೋಟ್ ಸೌಲಭ್ಯವನ್ನು ಒಳಗೊಂಡಿದೆ. ಬಸ್ ನಿಲ್ದಾಣದ ಸಮೀಪ ಬಸ್ ಬಂದಾಗ, ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು ತಮ್ಮ ರಿಮೋಟ್‌ನಲ್ಲಿ ‘Find’ ಬಟನ್ ಒತ್ತಿದರೆ, ಬಸ್‌ನ ಸ್ಪೀಕರ್‌ನಿಂದ ಮಾರ್ಗ ಸಂಖ್ಯೆಯ ಘೋಷಣೆ ಕೇಳಿಬರುತ್ತದೆ. ಇದರಿಂದ ಅವರು ಸರಿಯಾದ ಬಸ್‌ನಲ್ಲಿ ಸುರಕ್ಷಿತವಾಗಿ ಏರಬಹುದು. ಅಲ್ಲದೆ, ಚಾಲಕ ಮತ್ತು ನಿರ್ವಾಹಕರಿಗೆ ದೃಷ್ಟಿ ವಿಶೇಷ ಚೇತನ ಪ್ರಯಾಣಿಕರು ಬಸ್‌ಗೆ ಏರುವ ಮಾಹಿತಿ ತಿಳಿದು, ಅವರಿಗೆ ಸಹಾಯ ಮಾಡಲು ಬಸ್‌ನ್ನು ಹೆಚ್ಚು ಸಮಯ ನಿಲ್ಲಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕ ಶ್ರೀ ತನ್ವೀರ್ ಶೇಟ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಶ್ರೀ ಜಿ.ಟಿ. ದೇವೇಗೌಡ, ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಶ್ರೀ ಅರುಣ್, ಮತ್ತು GIZ ಮುಖ್ಯಸ್ಥ ಶ್ರೀ ಮಂಜುನಾಥ್ ಶೇಖರ್ ಉಪಸ್ಥಿತರಿದ್ದರು.
ಈ ಯೋಜನೆಯು ದೃಷ್ಟಿ ವಿಶೇಷ ಚೇತನರಿಗೆ ಸಾರ್ವಜನಿಕ ಸಾರಿಗೆಯನ್ನು ಸುಲಭವಾಗಿ ಬಳಸಲು ಅನುಕೂಲವಾಗುವುದರ ಜೊತೆಗೆ, ಸಮಾಜದ ಎಲ್ಲ ವರ್ಗದವರಿಗೂ ಸಮಾನವಾಗಿ ಸಾರಿಗೆ ಸೌಲಭ್ಯ ಒದಗಿಸುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.