ಮೈಸೂರು: ಸಾಂಸ್ಕೃತಿಕ ನಗರವಾಗಿ ಖ್ಯಾತಿಗಳಿಸಿರುವ ಮೈಸೂರು ಇಂದು ಮಾದಕ ವಸ್ತು (ಡ್ರಗ್ಸ್) ತಯಾರಿಕೆಯ ಕೇಂದ್ರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಕೀರ್ತಿಗೆ ಒಳಗಾಗಿರುವುದು ರಾಜ್ಯಕ್ಕೆ ದುರಂತಕರ ಸಂಗತಿಯಾಗಿದೆ. ಇತ್ತೀಚೆಗೆ ಬೆಳಕಿಗೆ ಬಂದ ಮಾಹಿತಿಯ ಪ್ರಕಾರ, ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದಿಂದ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಇತರ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆಯಾಗುತ್ತಿತ್ತು. ಈ ಘಟಕದಿಂದ ಬಳಸಲಾಗುತ್ತಿದ್ದ ರಾಸಾಯನಿಕಗಳು, ಉಪಕರಣಗಳು ಸೇರಿದಂತೆ ದೊಡ್ಡ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ತಯಾರಿಕೆ ಬೆಳಕಿಗೆ ಬಂದಿರುವುದು ಇದೇ ಮೊದಲ ಬಾರಿಗೆ ಎಂಬುದು ಗಂಭೀರ ಚಿಂತೆಗೆ ಕಾರಣವಾಗಿದೆ. ಆದರೆ, ಈ ಸಂವೇದನಾಶೀಲ ವಿಷಯವನ್ನು ಕರ್ನಾಟಕದ ಪೊಲೀಸರಿಗಿಂತ ಬೇರೆ ರಾಜ್ಯದ ಪೊಲೀಸರು ಬಂದು ಬಯಲಿಗೆಳೆದಿರುವುದು ರಾಜ್ಯ ಸರ್ಕಾರದ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಘಟನೆಯ ಬಗ್ಗೆ ಗೃಹ ಸಚಿವರು ಸ್ವತಃ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು, ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತ ಮತ್ತು ರಾಜ್ಯದ ಆಂತರಿಕ ಭದ್ರತೆಯ ಕುಸಿತಕ್ಕೆ ಕೈಗನ್ನಡಿಯಾಗಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯ ಗಂಭೀರ ಸಮಸ್ಯೆಗಳು ದಿನನಿತ್ಯ ಬೆಳಕಿಗೆ ಬರುತ್ತಿವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರು ಶಕ್ತಿ ರಾಜಕಾರಣ, ಕುರ್ಚಿ ಕಿತ್ತಾಟ, ಪಕ್ಷಪಾತ ಮತ್ತು ಅಧಿಕಾರದ ಕಚ್ಚಾಟದಲ್ಲಿ ಮುಳುಗಿರುವುದರಿಂದ ರಾಜ್ಯದ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ, ಮಾದಕ ವಸ್ತುಗಳ ಜಾಲ ಬೇರೂರಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತಿವೆ.
ಈ ಘಟನೆಯಿಂದ ಕರ್ನಾಟಕದ ಆಡಳಿತದ ದುರ್ಬಲತೆ ಮತ್ತು ಕಾನೂನು ವ್ಯವಸ್ಥೆಯ ಕುಸಿತವು ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡಿದೆ. ಸರ್ಕಾರ ಈ ಸಮಸ್ಯೆಗೆ ಶೀಘ್ರವಾಗಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ರಾಜ್ಯದ ಖ್ಯಾತಿಗೆ ಮತ್ತಷ್ಟು ಧಕ್ಕೆಯಾಗುವ ಸಾಧ್ಯತೆ ಇದೆ.