ಬೆಂಗಳೂರು, ಮೇ 13: ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ ಮೂರು ಮನೆಗಳಲ್ಲಿ ಕಳ್ಳತನ ನಡೆಸಿದ ಪ್ರಕರಣದಲ್ಲಿ ಪೋಲಿಸ್‍ರು ಆರೋಪಿ ಶ್ರೀನಿವಾಸ್ (35) ಎಂಬವನನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕೆಂಪಲ್ಲಿಗೆ ಮೂಲದ ಈತ, ಮೈಸೂರಿನಲ್ಲಿ ವಾಸವಿದ್ದನು.
ಪೋಲಿಸರ ಪ್ರಕಾರ, ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಶ್ರೀನಿವಾಸ್ ಇತ್ತೀಚೆಗೆ ಆನ್‌ಲೈನ್ ಗೇಮ್‌ಗಳಿಗೆ ಆಗಿರುವ ಆಸಕ್ತಿ ಮತ್ತು ಹಣದ ಅವಶ್ಯಕತೆಯಿಂದಾಗಿ ಕಳ್ಳತನಕ್ಕೆ ಕೈಹಾಕಿದ್ದ. ಈತನ ಮೇಲೆ ಈಗಾಗಲೇ ಆಂಧ್ರಪ್ರದೇಶದಲ್ಲಿ 87 ಕ್ಕೂ ಹೆಚ್ಚು ಕೇಸುಗಳು, ಮತ್ತು ಕರ್ನಾಟಕದಲ್ಲಿ ಧಾರವಾಡ, ಬೀದರ್, ಜೆ.ಬಿ ನಗರ ಸೇರಿ ನಾಲ್ಕು ಕೇಸುಗಳು ದಾಖಲಾಗಿವೆ.
ಕಳೆದ ಕೆಲ ವರ್ಷಗಳಿಂದ ಶ್ರೀನಿವಾಸ್ ಮೈಸೂರಿನಲ್ಲಿ ವಾಸವಿದ್ದು, ಅಲ್ಲಿಂದಲೇ ವಿವಿಧ ಊರುಗಳಿಗೆ ಹೋಗಿ ಕಳ್ಳತನ ಮಾಡಿ ಮತ್ತೆ ಮೈಸೂರಿಗೆ ಮರಳುತ್ತಿದ್ದನು. ಇತ್ತೀಚೆಗೆ ಕೊಡಿಗೆಹಳ್ಳಿ ವ್ಯಾಪ್ತಿಯ ಬಾಲಾಜಿ ಲೇಔಟ್‌ನಲ್ಲಿ ಎರಡು ಮನೆ ಹಾಗೂ ಪಾರ್ವತಮ್ಮ ಲೇಔಟ್‌ನಲ್ಲಿ ಒಂದು ಮನೆ ಸೇರಿ ಒಟ್ಟು ಮೂರು ಮನೆಗಳಲ್ಲಿ ದಿನದೊಳಗೆ ಕಳ್ಳತನ ಮಾಡಿದ್ದನು.
ಆತನನ್ನು ಹಿಡಿದ ಪೋಲಿಸರು ಖಾಸಗಿ ಪಿಜಿಯಲ್ಲಿ ತಂಗಿದ್ದ ಶ್ರೀನಿವಾಸನಿಂದ ₹9 ಲಕ್ಷ ಮೌಲ್ಯದ 145 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈತನ ಸಹೋದರರು ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಇಂಜಿನಿಯರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
2008ರಲ್ಲಿ ತಾನು ಕೆಲಸ ಮಾಡುತ್ತಿದ್ದ ಸಿನಿಮಾ ಸೆಟ್‌ನಲ್ಲಿ ಲ್ಯಾಪ್‌ಟಾಪ್ ಕದ್ದು ಮೊದಲ ಬಾರಿಗೆ ಜೈಲು ಪ್ರವೇಶಿಸಿದ್ದ ಶ್ರೀನಿವಾಸ್, ಬಳಿಕ ನಾನಾ ರೀತಿಯ ಕಳ್ಳತನ ಮತ್ತು ಸೈಬರ್ ವಂಚನೆ ಕೇಸುಗಳಲ್ಲಿ ಪತ್ತೆಯಾಗಿದ್ದಾನೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.