ಬೆಂಗಳೂರು: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ 13ನೇ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆದಿದ್ದು, ಮೈಸೂರು ಶೂಟಿಂಗ್ ಕ್ಲಬ್‌ನಿಂದ ತರಬೇತಿ ಪಡೆದ ಸ್ಪರ್ಧಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂ.ಎಸ್.ಪುಣ್ಯ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರೆ, ಸೇಫಿಯಂಟ್ ಕಾಲೇಜಿನ ಪಿ.ವರ್ಷಿಣಿ 1 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ವಿಜೇತರಾದರು. ಇದೇ ರೀತಿ, ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಪವನಿ ಕಾಮತ್ 1 ಬೆಳ್ಳಿ ಪದಕ, ಹಾಗೂ ಚೇತನ ಓಬು ಲಕ್ಷ್ಮಿ ಮತ್ತು ಎಸ್.ತರುಣ್ ತಲಾ ಒಂದು ಬೆಳ್ಳಿ ಪದಕವನ್ನು ಗೆದ್ದು ಮೈಸೂರು ಶೂಟಿಂಗ್ ಕ್ಲಬ್‌ಗೆ ಕೀರ್ತಿ ತಂದಿದ್ದಾರೆ.
ಈ ಸ್ಪರ್ಧೆಯಲ್ಲಿ 10 ಮೀ ರೈಫಲ್, 50 ಮೀ ರೈಫಲ್, ಪಿಸ್ತೂಲ್, ಟ್ರ್ಯಾಪ್ ಮತ್ತು ಸ್ಕೀಟ್ ಸೇರಿದಂತೆ ವಿವಿಧ ಶೂಟಿಂಗ್ ಈವೆಂಟ್‌ಗಳು ನಡೆದವು. ಮೈಸೂರು ಶೂಟಿಂಗ್ ಕ್ಲಬ್‌ನ ಸ್ಪರ್ಧಿಗಳು ಉತ್ತಮ ಅಂಕಗಳನ್ನು ಗಳಿಸಿ ದಕ್ಷಿಣ ವಲಯದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 50 ಮೀ ರೈಫಲ್ ಎನ್‌ಆರ್ ವಿಭಾಗದಲ್ಲಿ 5 ವೈಯಕ್ತಿಕ ಪದಕಗಳನ್ನು ಮತ್ತು ಐಎಸ್‌ಎಸ್‌ಎಫ್ ಈವೆಂಟ್‌ಗಳಲ್ಲಿ 4 ಪದಕಗಳನ್ನು ಕ್ಲಬ್‌ನ ಸ್ಪರ್ಧಿಗಳು ಗೆದ್ದಿದ್ದಾರೆ.
ರಾಷ್ಟ್ರೀಯ ಪ್ಯಾರಾ ಶೂಟರ್ ಬಿ.ಆರ್.ದರ್ಶನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಈ ಸ್ಪರ್ಧಿಗಳು ಈ ಯಶಸ್ಸನ್ನು ಸಾಧಿಸಿದ್ದಾರೆ. ಶೂಟಿಂಗ್‌ನಂತಹ ಸಾಹಸ ಕ್ರೀಡೆಯು ಯುವಕರಲ್ಲಿ ಚೈತನ್ಯವನ್ನು ಮೂಡಿಸುವ ಗುರಿಯೊಂದಿಗೆ ಮೈಸೂರಿನಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆಸಕ್ತರು ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತಿಗೆ ಸೇರಲು 9986950999 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ದರ್ಶನ್ ಕುಮಾರ್ ತಿಳಿಸಿದ್ದಾರೆ.